ನಾಳೆ(ಅ.16) ಉತ್ತರಪ್ರದೇಶದಲ್ಲಿ ಗುಂಪು ಥಳಿತದಿಂದ ಮೃತಪಟ್ಟ ದಲಿತ ವ್ಯಕ್ತಿಯ ಮನೆಗೆ ರಾಹುಲ್ ಗಾಂಧಿ ಭೇಟಿ
ರಾಹುಲ್ ಗಾಂಧಿ | Photo Credi : PTI
ಹೊಸದಿಲ್ಲಿ, ಅ. 15: ಉತ್ತರಪ್ರದೇಶದ ರಾಯ್‌ಬರೇಲಿ ಜಿಲ್ಲೆಯಲ್ಲಿ ಈ ತಿಂಗಳ ಆದಿ ಭಾಗದಲ್ಲಿ ಗುಂಪಿನಿಂದ ಥಳಿತಕ್ಕೊಳಗಾಗಿ ಮೃತಪಟ್ಟ ದಲಿತ ವ್ಯಕ್ತಿ ಹರಿಓಮ್ ವಾಲ್ಮೀಕಿಯ ಕುಟುಂಬ ಸದಸ್ಯರನ್ನು ಭೇಟಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಫತೇಪುರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಹರಿಓಮ್ ವಾಲ್ಮೀಕಿಯನ್ನು ಕಳ್ಳನೆಂದು ಭಾವಿಸಿ ಗುಂಪೊಂದು ಥಳಿಸಿ ಕೊಂದಿತ್ತು.
ರಾಹುಲ್ ಗಾಂಧಿ ಗುರುವಾರ ಬೆಳಗ್ಗೆ ದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಕಾನ್ಪುರ ತಲುಪಲಿದ್ದಾರೆ. ಬಳಿಕ ಅವರು ಫತೇಪುರ್‌ಗೆ ಕಾರಿನಲ್ಲಿ ಪ್ರಯಾಣಿಸಿ ಸಂತ್ರಸ್ತನ ಕುಟುಂಬವನ್ನು ಭೇಟಿ ಮಾಡುತ್ತಾರೆ. ಬಳಿಕ ಅವರು ಕಾನ್ಪುರಕ್ಕೆ ಹಿಂದಿರುಗಿ ಅಸ್ಸಾಂಗೆ ತೆರಳುತ್ತಾರೆ.
ರಾಹುಲ್ ಗಾಂಧಿ ಸಂತ್ರಸ್ತ ಕುಟುಂಬವನ್ನು ಭೇಟಿಯಾಗಿ ಅವರಲ್ಲಿ ಧೈರ್ಯ ತುಂಬುತ್ತಾರೆ ಮತ್ತು ನ್ಯಾಯ ಒದಗಿಸಿಕೊಡುವ ಭರವಸೆಯನ್ನು ನೀಡಲಿದ್ದಾರೆ ಎಂದು ಕಾಂಗ್ರೆಸ್‌ನ ಉತ್ತರಪ್ರದೇಶ ಘಟಕದ ಅಧ್ಯಕ್ಷ ಅಜಯ್ ರೈ ತಿಳಿಸಿದರು.
ಹರಿಓಮ್ ವಾಲ್ಮೀಕಿಯನ್ನು ಅಕ್ಟೋಬರ್ 2ರ ರಾತ್ರಿ ನೆರೆಯ ರಾಯ್‌ಬರೇಲಿ ಜಿಲ್ಲೆಯ ಜಮುನಾಪುರ ಗ್ರಾಮದಲ್ಲಿ ಗುಂಪೊಂದು ಥಳಿಸಿ ಕೊಂದಿತ್ತು. ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದಲಿತರನ್ನು ರಕ್ಷಿಸಲು ಮತ್ತು ಗುಂಪು ಹಿಂಸೆಯನ್ನು ಹತ್ತಿಕ್ಕಲು ಉತ್ತರಪ್ರದೇಶದ ಬಿಜೆಪ ಸರಕಾರ ವಿಫಲವಾಗಿದೆ ಎಂಬುದಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಆರೋಪಿಸಿವೆ.