“ಚುನಾವಣೆ ನ್ಯಾಯಯುತವಾಗಿ ನಡೆದಿಲ್ಲ” : ಬಿಹಾರ ಫಲಿತಾಂಶದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ
Photo | PTI
ಹೊಸದಿಲ್ಲಿ : ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ್ ಭಾರೀ ಹಿನ್ನಡೆ ಅನುಭವಿಸಿದ ಬೆನ್ನಲ್ಲೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣೆ ಮೊದಲಿನಿಂದಲೂ ನ್ಯಾಯಯುತವಾಗಿರಲಿಲ್ಲ ಎಂದು ಹೇಳಿದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಮಹಾಘಟಬಂಧನ್‌ಗೆ ಬೆಂಬಲಿಸಿದ ಮತದಾರರಿಗೆ ಧನ್ಯವಾದ ಅರ್ಪಿಸಿದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ವಿರೋಧ ಪಕ್ಷಗಳು ತಮ್ಮ ಹೋರಾಟವನ್ನು ಇನ್ನಷ್ಟು ಬಲಪಡಿಸುತ್ತವೆ ಎಂದು ಹೇಳಿದರು.
"ಮಹಾಘಟಬಂಧನ್ ಮೇಲೆ ನಂಬಿಕೆ ಇಟ್ಟ ಬಿಹಾರದ ಲಕ್ಷಾಂತರ ಮತದಾರರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ. ಬಿಹಾರದಲ್ಲಿನ ಈ ಫಲಿತಾಂಶ ನಿಜಕ್ಕೂ ಆಶ್ಚರ್ಯಕರವಾಗಿದೆ. ಮೊದಲಿನಿಂದಲೇ ನ್ಯಾಯಸಮ್ಮತವಾಗಿರದ ಚುನಾವಣೆಯಲ್ಲಿ ನಾವು ಗೆಲ್ಲಲು ಸಾಧ್ಯವಾಗಲಿಲ್ಲ" ಎಂದು ಹೇಳಿದರು.
ಬಿಹಾರ ತೀರ್ಪನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಹಿನ್ನಡೆ ಎಂದು ಕರೆದ ರಾಹುಲ್ ಗಾಂಧಿ, ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟವು ಫಲಿತಾಂಶಗಳ ಬಗ್ಗೆ ಆಳವಾಗಿ ಪರಿಶೀಲನೆ ನಡೆಸುತ್ತದೆ ಎಂದು ಹೇಳಿದರು.
ಈ ಹೋರಾಟ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಇಂಡಿಯಾ ಮೈತ್ರಿಕೂಟ ಈ ಫಲಿತಾಂಶಗಳನ್ನು ಆಳವಾಗಿ ಪರಿಶೀಲಿಸುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ತಮ್ಮ ಪ್ರಯತ್ನಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರಿಸುತ್ತದೆ ಎಂದು ಹೇಳಿದರು.