‘ಜನ ನಾಯಗನ್’ ಗೆ ಕೇಂದ್ರದ ಅಡ್ಡಿ: ರಾಹುಲ್ ಗಾಂಧಿ ಆರೋಪ
"ಪ್ರಧಾನಿ ತಮಿಳರ ಧ್ವನಿಯನ್ನು ದಮನಿಸುತ್ತಿದ್ದಾರೆ"
ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ನಟಿಸಿರುವ ‘ಜನನಾಯಗನ್’ ಚಿತ್ರದ ಬಿಡುಗಡೆಯನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಆರೋಪಗಳ ಬೆನ್ನಲ್ಲೇ, ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಮಿಳು ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇಂತಹ ನಡೆಗಳಿಂದ ತಮಿಳು ಜನರ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ವಿವಾದದ ಕುರಿತು ಮಂಗಳವಾರ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, "ʼಜನನಾಯಗನ್’ ಚಿತ್ರದ ಬಿಡುಗಡೆಯನ್ನು ತಡೆಯಲು ಮುಂದಾಗಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಮಿಳು ಸಂಸ್ಕೃತಿಯ ಮೇಲೆ ದಾಳಿ ನಡೆಸುತ್ತಿದೆ. ಮಿಸ್ಟರ್ ಮೋದಿ, ನೀವು ತಮಿಳು ಜನರ ಧ್ವನಿಯನ್ನು ಎಂದಿಗೂ ಅಡಗಿಸಲು ಸಾಧ್ಯವಿಲ್ಲ” ಎಂದು ನೇರ ಸವಾಲು ಒಡ್ಡಿದ್ದಾರೆ.
‘ಜನನಾಯಗನ್’ ಚಿತ್ರದ ಬಿಡುಗಡೆಯನ್ನು ತಡೆಹಿಡಿಯಲು ಅಥವಾ ಸೆನ್ಸಾರ್ ಅನುಮತಿ ದೊರೆಯದಂತೆ ಮಾಡಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತುದಿಗಾಲಲ್ಲಿ ನಿಂತಿದೆ ಎಂಬ ಹಿನ್ನೆಲೆಯಲ್ಲಿ ಈ ವಿವಾದ ಉದ್ಭವಿಸಿದೆ.
ಕೇಂದ್ರ ಸರ್ಕಾರ ತನ್ನ ಆಕ್ಷೇಪಣೆ ಕುರಿತು ಈವರೆಗೆ ಸಾರ್ವಜನಿಕವಾಗಿ ಯಾವುದೇ ವಿವರ ನೀಡದಿದ್ದರೂ, ಪ್ರಮಾಣೀಕರಣದ ನಿಯಮಗಳು ಹಾಗೂ ವಿಷಯದ ಮಾರ್ಗಸೂಚಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ವಿಶೇಷವಾಗಿ ಚಲನಚಿತ್ರದಲ್ಲಿರುವ ರಾಜಕೀಯ ವಿಷಯಗಳು ಹಾಗೂ ಹಾಲಿ ಆಡಳಿತದ ಕುರಿತು ಇರುವ ಸಮಾನಾಂತರ ಹೋಲಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದೆ ಎನ್ನಲಾಗಿದೆ.
The I&B Ministry’s attempt to block ‘Jana Nayagan’ is an attack on Tamil culture.
— Rahul Gandhi (@RahulGandhi) January 13, 2026
Mr Modi, you will never succeed in suppressing the voice of the Tamil people.