×
Ad

ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶ ಸಚಿವರ ನಡುವೆ ಮಾತಿನ ಚಕಮಕಿ; ವಿಡಿಯೋ ವೈರಲ್

Update: 2025-09-13 13:54 IST

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಚಿವ ದಿನೇಶ್ ಪ್ರತಾಪ್ ಸಿಂಗ್ ನಡುವೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.

ಪ್ರಮುಖ ಕೇಂದ್ರ ಯೋಜನೆಗಳ ಕುರಿತು ರಾಯ್ ಬರೇಲಿಯಲ್ಲಿ ಆಯೋಜನೆಗೊಂಡಿದ್ದ ಉನ್ನತ ಮಟ್ಟದ ಪರಾಮರ್ಶೆ ಸಭೆಯಲ್ಲಿ ಸದಸ್ಯರು ಮಾತನಾಡುವುದಕ್ಕೂ ಮುನ್ನ, ಅಧ್ಯಕ್ಷರ ಅನುಮತಿ ಪಡೆಯಬೇಕು ಎಂದು ಉತ್ತರ ಪ್ರದೇಶ ಸಚಿವ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಹೇಳಿದ್ದರಿಂದ ಈ ವಾಗ್ವಾದ ನಡೆದಿದೆ. 

ಸೆಪ್ಟೆಂಬರ್ 11ರ ಸಭೆಯಲ್ಲಿ ನಡೆದ ಮಾತಿನ ಚಕಮಕಿಯ ವಿಡಿಯೊ ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಜಿಲ್ಲಾಧಿಕಾರಿಗಳ ಬಚತ್ ಭವನ್ ನಲ್ಲಿ ಆಯೋಜನೆಗೊಂಡಿದ್ದ ದಿಶಾ (ಜಿಲ್ಲಾಭಿವೃದ್ಧಿ ಸಮನ್ವಯ ಮತ್ತು ನಿಗಾವಣೆ ಸಮಿತಿ) ಸಭೆಯಲ್ಲಿ ಈ ಘಟನೆ ನಡೆದಿದೆ. ಈ ಸಭೆಯಲ್ಲಿ ಅಮೇಥಿಯ ಸಂಸದ ಹಾಗೂ ದಿಶಾ ಸಹ ಅಧ್ಯಕ್ಷ ಕಿಶೋರಿ ಲಾಲ್ ಶರ್ಮ, ಹಲವಾರು ಶಾಸಕರು ಹಾಗೂ ಬ್ಲಾಕ್ ಮುಖ್ಯಸ್ಥರೂ ಕೂಡಾ ಉಪಸ್ಥಿತರಿದ್ದರು.

ಸಚಿವ ಸಿಂಗ್ ಅವರು ನೇರವಾಗಿ ಅಧಿಕಾರಿಗಳನ್ನು ಪ್ರಶ್ನಿಸಲು ಪ್ರಾರಂಭಿಸಿದ್ದರಿಂದ ಈ ವಾಗ್ವಾದ ನಡೆಯಿತು ಎಂದು ಶರ್ಮ ತಿಳಿಸಿದ್ದಾರೆ.

“ದಿಶಾ ಸಭೆಗಳಲ್ಲಿ ಸದಸ್ಯರು ಮಾತನಾಡುವುದಕ್ಕೂ ಮುನ್ನ, ಸಭಾಧ್ಯಕ್ಷರ ಅನುಮತಿ ಪಡೆಯಬೇಕು. ಲೋಕಸಭೆಯಲ್ಲಿ ಎಲ್ಲ ಪ್ರಶ್ನೆಗಳನ್ನೂ ಸ್ಪೀಕರ್ ಮೂಲಕ ಕೇಳುವ ವಿಧಾನದಂತೆ, ಈ ಸಭೆಯಲ್ಲೂ ಹಾಗೆ ಮಾಡಬೇಕು ಎಂದು ನಾನು ಅವರಿಗೆ ನೆನಪಿಸಿದೆ” ಎಂದು ಶರ್ಮ ಹೇಳಿದ್ದಾರೆ.

“ಓರ್ವ ಸಚಿವರಿಗೆ ಸಂಸದೀಯ ನಡವಳಿಕೆಗಳ ಅರಿವಿರಬೇಕು. ಮುಖ್ಯಮಂತ್ರಿಗಳು ಇಂತಹ ನಡವಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸಚಿವ ಸಂಪುಟದ ಶಿಸ್ತಿನ ಬಗ್ಗೆ ಇಂತಹ ನಡವಳಿಕೆಗಳು ಯಾವ ಸಂದೇಶವನ್ನು ರವಾನಿಸುತ್ತವೆ?” ಎಂದು ಶರ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News