×
Ad

ಮರಾಠಿ ಜನರು, ರಾಜ್ ಠಾಕ್ರೆ ವಿರುದ್ಧ ಹೇಳಿಕೆ; ಹೊಟೇಲ್ ನಿರ್ವಾಹಕನಿಗೆ ಎಂಎನ್‌ಎಸ್ ಕಾರ್ಯಕರ್ತರಿಂದ ಹಲ್ಲೆ

Update: 2025-08-09 21:35 IST

ರಾಜ್ ಠಾಕ್ರೆ | PTI 

ಠಾಣೆ, ಆ. 9: ಮರಾಠಿ ಜನರು ಹಾಗೂ ರಾಜ್ ಠಾಕ್ರೆ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಹೊಟೇಲ್ ನಿರ್ವಾಹಕನ ಮೇಲೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಠಾಣೆ ಜಿಲ್ಲೆಯ ಕಲ್ಯಾಣ್ ಪ್ರದೇಶದಲ್ಲಿ ನಡೆದಿದೆ.

ವೈರಲ್ ಆದ ವೀಡಿಯೊವನ್ನು ಗಮನದಲ್ಲಿರಿಸಿಕೊಂಡು ಕಾನೂನು ಹಾಗೂ ಸುವ್ಯವಸ್ಥೆ ಮೇಲಿನ ನಿಗಾವನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ದುರ್ಗಾಮಾತಾ ಮಂದಿರ ಚೌಕ್ ಪ್ರದೇಶದ ಹೊಟೇಲ್ ಒಂದರಲ್ಲಿ ನಡೆದಿದೆ. ಘಟನೆಯ ವೀಡಿಯೊ ತುಣುಕಿನಲ್ಲಿ ಮಹಾ ನಿರ್ಮಾಣ ಸೇನೆಯ ಕಲ್ಯಾಣ್ (ಪೂರ್ವ)ನ ಪದಾಧಿಕಾರಿ ಕುಶ್ ರಜಪೂತ್ ಹಾಗೂ ಇತರ ಕಾರ್ಯಕರ್ತರು ಹೊಟೇಲ್‌ನ ನಿರ್ವಾಹಕನೊಂದಿಗೆ ವಾಗ್ವಾದ ನಡೆಸುತ್ತಿರುವುದು ಹಾಗೂ ಆತನಿಗೆ ಥಳಿಸುತ್ತಿರುವುದು ಕಂಡು ಬಂದಿದೆ.

ಅಲ್ಲದೆ, ಆತ ಕ್ಷಮೆ ಕೋರುವಂತೆ ಹಾಗೂ ಭವಿಷ್ಯದಲ್ಲಿ ಇಂತಹ ಹೇಳಿಕೆಯನ್ನು ನೀಡುವುದಿಲ್ಲ ಎಂದು ಭರವಸೆ ನೀಡುವಂತೆ ಒತ್ತಾಯಿಸುತ್ತಿರುವುದು ಕಂಡು ಬಂದಿದೆ.

ಮರಾಠಿ ಮಾತನಾಡಲು ಸಾಧ್ಯವಾಗದೇ ಇರುವುದಕ್ಕೆ ಠಾಣೆ ಜಿಲ್ಲೆಯ ಮೀರಾ ಭಾಯಂದರ್ ಪ್ರದೇಶದಲ್ಲಿ ಉತ್ತರ ಭಾರತದ ಸಿಹಿ ತಿಂಡಿ ಅಂಗಡಿಯ ಮಾಲಕನಿಗೆ ಮಹಾ ನಿರ್ವಾಣ ಸೇನೆಯ ಕಾರ್ಯಕರ್ತರು ಥಳಿಸಿದ ಹಿನ್ನೆಲೆಯಲ್ಲಿ ಈತ ಈ ಹೇಳಿಕೆ ನೀಡಿದ್ದ.

ಮೀರಾ ಭಾಯಂದರ್ ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

‘‘ಸಾಮಾಜಿಕ ಮಾಧ್ಯಮದಲ್ಲಿ ಪ್ರಸರಣವಾಗುತ್ತಿರುವ ಕಲ್ಯಾಣ್ ಘಟನೆಯ ವೀಡಿಯೊವನ್ನು ನಾವು ನೋಡಿದ್ದೇವೆ. ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ. ನಾವು ಈ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಂಡಿದ್ದೇವೆೆ’’ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ತ್ರಿಭಾಷಾ ನೀತಿ ಅನುಷ್ಠಾನದ ಕುರಿತ ವಿವಾದದ ನಡುವೆ ಕಳೆದ ಎರಡು ತಿಂಗಳಿಂದ ಮುಂಬೈ ಮಹಾನಗರ ಪ್ರದೇಶದಲ್ಲಿ ನೆಲೆಸಿದ ಉತ್ತರ ಭಾರತದ ವಲಸಿಗರ ಮೇಲೆ ದಾಳಿ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News