ರಾಜಸ್ಥಾನ ಸಿಎಂಗೆ ಒಂದೇ ವರ್ಷದಲ್ಲಿ ಮೂರನೇ ಬಾರಿಗೆ ಜೀವ ಬೆದರಿಕೆ
PC: x.com/BhajanlalBjp
ಜೈಪುರ: ಬಿಗಿ ಭದ್ರತೆಯ ದಸೂವಾ ಜೈಲಿನಿಂದ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಅವರಿಗೆ ಜೀವ ಬೆದರಿಕೆ ಹಾಕಿದ ಕೈದಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಇದು ಕಳೆದ ಒಂದು ವರ್ಷದಲ್ಲಿ ಸಿಎಂಗೆ ಬಂದಿರುವ ಮೂರನೇ ಜೀವಬೆದರಿಕೆ ಕರೆಯಾಗಿದೆ.
ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೆ ಗುರಿಯಾಗಿರುವ 29 ವರ್ಷದ ರಿಂಕು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. "ಇಂದು ಮಧ್ಯರಾತ್ರಿಯ ಒಳಗಾಗಿ ಮುಖ್ಯಮಂತ್ರಿಯನ್ನು ಹತ್ಯೆ ಮಾಡುತ್ತೇನೆ" ಎಂದು ಎಚ್ಚರಿಕೆ ನೀಡಿದ್ದ. ಶನಿವಾರ ಮಧ್ಯರಾತ್ರಿ ಬಳಿಕ 10 ನಿಮಿಷ ಅವಧಿಯಲ್ಲಿ ಎರಡು ಬಾರಿ ಕರೆ ಮಾಡಿದ್ದ. ಇದು ಜೈಲಿನಲ್ಲಿ ಕೈದಿಗಳು ಅನಧಿಕೃತವಾಗಿ ಮೊಬೈಲ್ ಕರೆಗಳನ್ನು ಮಾಡುತ್ತಿರುವ ಬಗ್ಗೆ ಆತಂಕ ಹುಟ್ಟಲು ಕಾರಣವಾಗಿದೆ.
ಜೈಪುರದಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. "ನಮ್ಮ ತಂಡ ಜೈಲಿನಲ್ಲಿ ಶೋಧ ನಡೆಸಿ ರಿಂಕುವನ್ನು ವಶಕ್ಕೆ ಪಡೆದಿದೆ. ಆರೋಪಿ ಬಳಸುತ್ತಿದ್ದ ಎನ್ನಲಾದ ಒಂದು ಚಿಪ್, ಕೀಪ್ಯಾಡ್ ಮೊಬೈಲ್ ಹಾಗೂ ಸಿಮ್ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಗುರುಶರಣ್ ಹೇಳಿದ್ದಾರೆ.
ಕಳೆದ ವರ್ಷದ ಜುಲೈ 27ರಂದು ಇಂಥದ್ದೇ ಕರೆಯನ್ನು ಮಾಡಿ ಭದ್ರತೆ ಉಲ್ಲಂಘಿಸಲಾಗಿತ್ತು. ಈ ಸಂದರ್ಭ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದರು. 2004ರ ಜನವರಿಯಲ್ಲಿ ಜೈಪುರ ಕೇಂದ್ರೀಯ ಕಾರಾಗೃಹದಿಂದಲೂ ಇಂಥದ್ದೇ ಬೆದರಿಕೆ ಕರೆ ಬಂದಿತ್ತು.