ರಾಜಸ್ಥಾನದ ಶಿಕ್ಷಣ ಇಲಾಖೆಯ ವೆಬ್‌ಸೈಟ್ ಹ್ಯಾಕ್; ಸರಣಿ ಪ್ರಚೋದನಕಾರಿ ಸಂದೇಶ ಪ್ರದರ್ಶನ
ಸಾಂದರ್ಭಿಕ ಚಿತ್ರ | PC : freepik.com
ಜೈಪುರ: ರಾಜಸ್ಥಾನ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಅನ್ನು ಮಂಗಳವಾರ ಹ್ಯಾಕ್ ಮಾಡಲಾಗಿದೆ. ಅಲ್ಲದೆ, ‘ಪಾಕಿಸ್ತಾನ್ ಸೈಬರ್ ಫೋರ್ಸ್’ ಹೆಸರಿನ ಅಡಿಯಲ್ಲಿ ಸರಣಿ ಪ್ರಚೋದನಕಾರಿ ಸಂದೇಶಗಳನ್ನು ಪ್ರದರ್ಶಿಸಲು ವೆಬ್‌ಸೈಟ್‌ನ ಹೋಮ್‌ಪೇಜ್ ಅನ್ನು ಮಾರ್ಪಡಿಸಲಾಗಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ಆಂತರಿಕವಾಗಿ ಯೋಜಿಸಲಾಗಿದೆ. ಇದು ಒಳಗಿನವರ ಕೃತ್ಯ ಎಂದು ಒಂದು ಸಂದೇಶ ಪ್ರತಿಪಾದಿಸಿದೆ. ಇನ್ನೊಂದು ಸಂದೇಶ ಧಾರ್ಮಿಕ ವಿಭಜನೆ ಹಾಗೂ ಸಂರ್ಘರ್ಷ ಪ್ರಚೋದಿಸಲು ಭಾರತ ಸರಕಾರವೇ ಈ ಕೃತ್ಯ ನಡೆಸಿದೆ. ಅದರ ಜವಾಬ್ದಾರಿಯನ್ನು ಬೇರೆಯವರ ಮೇಲೆ ಹೊರಿಸಿದೆ ಎಂದು ಹೇಳಿದೆ.
ದಿವಂಗತ ಲೆಫ್ಟಿನೆಂಟ್ ವಿನಯ್ ನರ್ವಾಲ್ ಪತ್ನಿ ಹಿಮಾಂಶಿ ನರ್ವಾಲ್ ಅವರ ಬಗ್ಗೆ ಹ್ಯಾಕರ್‌ಗಳು ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ. ಹಿಮಾಂಶಿ ನರ್ವಾಲ್ ಅವರು ತಮ್ಮ ಪತಿಯ ಮೃತದೇಹದ ಪಕ್ಕ ಕುಳಿತಿರುವ ಚಿತ್ರ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಡಿತ್ತು.
ವೆಬ್‌ಸೈಟ್ ಹ್ಯಾಕ್ ಆಗಿರುವುದು ತಿಳಿದ ಕೂಡಲೇ ಶಿಕ್ಷಣ ಇಲಾಖೆ ವೆಬ್‌ಸೈಟ್ ಅನ್ನು ಬ್ಲಾಕ್ ಮಾಡಿದೆ.
ಸೈಬರ್ ದಾಳಿ ಖಂಡಿಸಿ ಹೇಳಿಕೆ ನೀಡಿರುವ ಶಿಕ್ಷಣ ಸಚಿವ ಮದನ್ ದಿಲಾವರ್, ‘‘ಶಿಕ್ಷಣ ಇಲಾಖೆಯ ಐಟಿ ಘಟಕವನ್ನು ಸಕ್ರಿಯಗೊಳಿಸಲಾಗಿದೆ. ಪ್ರಸ್ತುತ ವೆಬ್‌ಸೈಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸರಿಪಡಿಸುವ ಪ್ರಯತ್ನಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಘಟನೆಯ ಕುರಿತು ಸೈಬರ್ ಭದ್ರತಾ ಸಂಸ್ಥೆಗಳಿಗೆ ಕೂಡ ನಾವು ಮಾಹಿತಿ ನೀಡಿದ್ದೇವೆ. ಸೈಬರ್ ದಾಳಿಗೆ ಹೊಣೆಗಾರರಾದ ಗುಂಪನ್ನು ಗುರುತಿಸಲು ಹಾಗೂ ಹಾನಿಯ ಪ್ರಮಾಣವನ್ನು ಅಂದಾಜಿಸಲು ತನಿಖೆ ಆರಂಭಿಸಲಾಗಿದೆ’’ ಎಂದಿದ್ದಾರೆ.
‘‘ಇದುವರೆಗೆ ಯಾವುದೇ ಅತಿಸೂಕ್ಷ್ಮ ದತ್ತಾಂಶ ಸೋರಿಕೆಯಾಗಿರುವ ಬಗ್ಗೆ ದೃಢಪಟ್ಟಿಲ್ಲ. ಆದರೆ, ನಮ್ಮ ದತ್ತಾಂಶದ ಭದ್ರತೆ ಹಾಗೂ ಸಮಗ್ರತೆಯ ಖಾತರಿಗೆ ಎಲ್ಲಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸಲಾಗುವುದು’’ ಎಂದು ಅವರು ಹೇಳಿದ್ದಾರೆ.