×
Ad

ರಾಜಸ್ಥಾನ ವಿಧಾನಸಭೆಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೈಬಿಡಲು ಲಂಚ ಪಡೆದ ಆರೋಪ : ಶಾಸಕನ ಬಂಧನ

Update: 2025-05-05 12:12 IST

 ಜೈಕೃಷ್ಣ ಪಟೇಲ್ (Photo credit: NDTV)

ಜೈಪುರ : ರಾಜ್ಯ ವಿಧಾನಸಭೆಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಮೂರು ಪ್ರಶ್ನೆಗಳನ್ನು ಕೈಬಿಡಲು 20 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಭಾರತ್ ಆದಿವಾಸಿ ಪಕ್ಷದ ಶಾಸಕ ಜೈಕೃಷ್ಣ ಪಟೇಲ್ ಅವರನ್ನು ರಾಜಸ್ಥಾನದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ ಎಂದು ಎಸಿಬಿಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

ತೋಡಾಭಿಮ್ ಪ್ರದೇಶದಲ್ಲಿ ಗಣಿಗಾರಿಕೆ ಗುತ್ತಿಗೆಗೆ ಸಂಬಂಧಿಸಿದ ಮೂರು ಪ್ರಶ್ನೆಗಳನ್ನು ಕೈಬಿಡಲು ಪಟೇಲ್ ಗಣಿ ಮಾಲಿಕನಿಂದ 2.5 ಕೋಟಿ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಜೈಕೃಷ್ಣ ಪಟೇಲ್ ಬನ್ಸ್ವಾರಾ ಜಿಲ್ಲೆಯ ಬಗಿಡೋರಾ ವಿಧಾನಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ನಡೆದ ಉಪಚುನಾವಣೆಯಲ್ಲಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು.

ಗಣಿಗಾರಿಕೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೈಬಿಡಲು ಪಟೇಲ್ ದೂರುದಾರರಿಂದ 10 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ 2.5 ಕೋಟಿ ರೂ.ಗೆ ಒಪ್ಪಂದವನ್ನು ಮಾಡಲಾಯಿತು. ಬನ್ಸ್ವಾರಾದಲ್ಲಿ ಈ ಮೊದಲು ಅವರಿಗೆ 1 ಲಕ್ಷ ರೂ. ನೀಡಿದ್ದರು. ಇದೀಗ ಮತ್ತೆ 20 ಲಕ್ಷ ರೂ. ಪಡೆಯುವಾಗ ಶಾಸಕರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ʼಪ್ರಕರಣದ ಬಗ್ಗೆ ವಿಧಾನಸಭಾ ಸ್ಪೀಕರ್‌ಗೆ ಮಾಹಿತಿ ನೀಡಲಾಗಿದೆ. ಅವರ ಅನುಮತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಶಾಸಕರನ್ನು ಬಂಧಿಸಲಾಯಿತು. ಶಾಸಕರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಮತ್ತು ಲಂಚವನ್ನು ಪಡೆದಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಎಸಿಬಿ ಬಳಿ ಆಡಿಯೋ ಮತ್ತು ವಿಡಿಯೋ ಪುರಾವೆಗಳಿವೆ. ಇದು ಅವರನ್ನು ಶಿಕ್ಷೆಗೆ ಒಳಪಡಿಸಲು ಸಹಾಯ ಮಾಡುತ್ತದೆʼ ಎಂದು ಎಸಿಬಿ ಮಹಾನಿರ್ದೇಶಕ ರವಿಪ್ರಕಾಶ್ ಮೆಹರ್ದಾ ಹೇಳಿದರು.

ಭಾರತ್ ಆದಿವಾಸಿ ಪಕ್ಷದ (ಬಿಎಪಿ) ಸಂಚಾಲಕ ಮತ್ತು ಬನ್ಸ್ವಾರಾ ಸಂಸದ ರಾಜ್ಕುಮಾರ್ ರೋಟ್ ಈ ಕುರಿತು ಪ್ರತಿಕ್ರಿಯಿಸಿ, ಶಾಸಕರ ಕೈವಾಡ ಕಂಡುಬಂದರೆ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News