ಶಾಶ್ವತವಾಗಿ ಯಾರೂ ಸ್ನೇಹಿತರಲ್ಲ, ಶತ್ರುಗಳೂ ಅಲ್ಲ: ರಾಜ್‌ನಾಥ್
ರಾಜ್‌ನಾಥ್ ಸಿಂಗ್ | PTI
ಹೊಸದಿಲ್ಲಿ, ಆ. 30: ರಕ್ಷಣಾ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆಯನ್ನು ಸಾಧಿಸುವ ಅಗತ್ಯವಿದೆ ಎಂದು ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಶನಿವಾರ ಹೇಳಿದ್ದಾರೆ ಹಾಗೂ ‘‘ಶಾಶ್ವತ ಸ್ನೇಹಿತರು ಅಥವಾ ಶತ್ರುಗಳು ಯಾರೂ ಇಲ್ಲ, ಇರುವುದು ಶಾಶ್ವತ ಹಿತಾಸಕ್ತಿಗಳು ಮಾತ್ರ’’ ಎಂಬುದಾಗಿಯೂ ಅವರು ಘೋಷಿಸಿದ್ದಾರೆ.
ಅಮೆರಿಕದೊಂದಿಗಿನ ಸುಂಕ ಸಮರ ಮತ್ತು ಭಾರತ-ಚೀನಾ ಸಂಬಂಧದಲ್ಲಿನ ಸುಧಾರಣೆಯ ಹಿನ್ನೆಲೆಯಲ್ಲಿ, ಎನ್‌ಡಿಟಿವಿ ರಕ್ಷಣಾ ಸಮ್ಮೇಳನ 2025ರಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ಹೇಳಿದ ರಕ್ಷಣಾ ಸಚಿವರು, ಐಎನ್‌ಎಸ್ ಹಿಮಗಿರಿ ಮತ್ತು ಐಎನ್‌ಎಸ್ ಉದಯಗಿರಿ ಎಂಬ ಎರಡು ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ನೀಲಗಿರಿ ದರ್ಜೆಯ ಅದೃಶ್ಯ ಯುದ್ಧನೌಕೆಗಳನ್ನು ನೌಕಾಪಡೆಯ ಸೇವೆಗೆ ನಿಯೋಜಿಸಲಾಗಿದೆ ಎಂದು ಹೇಳಿದರು.
‘‘ಸ್ವಾವಲಂಬನೆಗೆ ಒತ್ತು ನೀಡುವುದಕ್ಕಾಗಿ, ಭಾರತವು ಈಗ ಎಲ್ಲಾ ಯುದ್ಧ ನೌಕೆಗಳನ್ನು ದೇಶದಲ್ಲೇ ನಿರ್ಮಿಸುತ್ತಿದೆ. ಇತರ ಯಾವುದೇ ದೇಶಗಳಿಂದ ಯುದ್ಧನೌಕೆಗಳನ್ನು ಖರೀದಿಸದಿರುವ ಮತ್ತು ಅವುಗಳನ್ನು ಭಾರತದಲ್ಲೇ ನಿರ್ಮಿಸುವ ಪಣವನ್ನು ನೌಕಾಪಡೆ ತೊಟ್ಟಿದೆ’’ ಎಂದು ರಾಜ್‌ನಾಥ್ ಸಿಂಗ್ ಹೇಳಿದರು.
ಸ್ವದೇಶದಲ್ಲೇ ನಿರ್ಮಿಸಲಾಗಿರುವ ರಕ್ಷಣಾ ವ್ಯವಸ್ಥೆ ‘ಸುದರ್ಶನ ಚಕ್ರ’ವು ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಅವರು ಘೋಷಿಸಿದರು.