ಭಯೋತ್ಪಾದನೆ ಆತಂಕ | ಪಾಕಿಸ್ತಾನಕ್ಕೆ ಹಣಕಾಸು ನೆರವು ಮರುಪರಿಶೀಲನೆಗೆ ಐಎಂಎಫ್‌ಗೆ ರಾಜನಾಥ್ ಸಿಂಗ್ ಆಗ್ರಹ
ರಾಜನಾಥ್ ಸಿಂಗ್ | PC : PTI
ಭುಜ್(ಗುಜರಾತ್): ಭಾರತವು ಅಂತರರಾಷ್ಟ್ರೀಯ ಅಣುಶಕ್ತಿ ಸಂಸ್ಥೆ(ಐಎಇಎ)ಯಿಂದ ಪಾಕಿಸ್ತಾನದ ಅಣ್ವಸ್ತ್ರ ಸಂಗ್ರಹದ ಮೇಲ್ವಿಚಾರಣೆಗೆ ಆಗ್ರಹಿಸಿದ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನಕ್ಕೆ ಹಣಕಾಸು ನೆರವು ಒದಗಿಸುವ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಶುಕ್ರವಾರ ಅಂತರರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಗೆ ಕರೆ ನೀಡಿದ್ದಾರೆ.
‘ಪಾಕಿಸ್ತಾನವು ಐಎಂಎಫ್‌ನಿಂದ ಸ್ವೀಕರಿಸಿದ ಹಣದ ಹೆಚ್ಚಿನ ಭಾಗವನ್ನು ತನ್ನ ನೆಲದಲ್ಲಿಯ ಭಯೋತ್ಪಾದಕ ಮೂಲಸೌಕರ್ಯಕ್ಕಾಗಿ ವೆಚ್ಚ ಮಾಡುತ್ತದೆ ಎಂದು ನಾನು ಭಾವಿಸಿದ್ದೇನೆ. ಪಾಕಿಸ್ತಾನಕ್ಕೆ ಹಣಕಾಸು ನೆರವು ಒದಗಿಸುವ ಬಗ್ಗೆ ಐಎಂಎಫ್ ಮರುಚಿಂತನೆ ಮಾಡಬೇಕು ಎಂದು ಭಾರತವು ಬಯಸುತ್ತದೆ’ಎಂದು ಅವರು ಹೇಳಿದರು.
ಇಲ್ಲಿ ಭಾರತೀಯ ವಾಯುಪಡೆ(ಐಎಎಫ್)ಯ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಂಗ್, ಪಾಕಿಸ್ತಾನಕ್ಕೆ ಯಾವುದೇ ರೀತಿಯ ಆರ್ಥಿಕ ನೆರವು ಭಯೋತ್ಪಾದನೆಗೆ ಹಣಕಾಸು ಒದಗಿಸುವುದಕ್ಕೆ ಸಮವಾಗಿದೆ. ಹೀಗಾಗಿ ಐಎಂಎಫ್ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಹೇಳಿದರು.
ಎಂಎಂಎಫ್ ಮೇ 9ರಂದು ತನ್ನ ಆಡಳಿತ ಮಂಡಳಿ ಸಭೆಯಲ್ಲಿ ಪಾಕಿಸ್ತಾನಕ್ಕೆ ಏಳು ಶತಕೋಟಿ ಡಾ.ವಿಸ್ತ್ರತ ನಿಧಿ ಸೌಲಭ್ಯ(ಇಎಫ್‌ಎಫ್) ಸಾಲ ಕಾರ್ಯಕ್ರಮದ ಭಾಗವಾಗಿ ಒಂದು ಬಿಲಿಯನ್ ಡಾ.ಹಾಗೂ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರತೆ ಸೌಲಭ್ಯದಡಿ 1.3 ಶತಕೋಟಿ ಡಾ.ಗಳನ್ನು ಮಂಜೂರು ಮಾಡಿದೆ. ಸಭೆಯಲ್ಲಿ ಮತದಾನದಿಂದ ದೂರವುಳಿದ ಭಾರತವು, ಹಣವು ಸರಕಾರಿ ಪ್ರಾಯೋಜಿತ ಗಡಿಯಾಚೆಯ ಭಯೋತ್ಪಾದನೆಗೆ ದುರ್ಬಳಕೆಯಾಗಬಹುದು ಎಂದು ಹೇಳಿತ್ತು.