×
Ad

ಸಿಜೆಐ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್‌ಗೆ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತಿಗೆ ನಿಷೇಧ

Update: 2025-10-09 12:07 IST

ವಕೀಲ ರಾಕೇಶ್ ಕಿಶೋರ್ (Photo: ANI)

ಹೊಸದಿಲ್ಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಸುಪ್ರೀಂ ಕೋರ್ಟ್ ಕಲಾಪದ ವೇಳೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್‌ (SCBA) ತಾತ್ಕಾಲಿಕ ಸದಸ್ಯತ್ವವನ್ನು ತಕ್ಷಣದಿಂದಲೇ ರದ್ದುಪಡಿಸಿದೆ. ಇದರಿಂದ ಆರೋಪಿ ವಕೀಲ ಸುಪ್ರೀಂ ಕೋರ್ಟ್‌ನಲ್ಲಿ ವಕಾಲತ್ತು ಮಾಡುವ ಹಕ್ಕನ್ನು ಕಳೆದುಕೊಂಡಿದ್ದಾರೆ.

2011ರಲ್ಲಿ ನೋಂದಣಿ ಸಂಖ್ಯೆ K-01029/RES ಮೂಲಕ ತಾತ್ಕಾಲಿಕ ಸದಸ್ಯರಾಗಿ ಸೇರ್ಪಡೆಯಾದ ಕಿಶೋರ್ ನನ್ನು ಸಂಘದಿಂದಲೇ ವಜಾಗೊಳಿಸಿ, ಆತನ ಹೆಸರನ್ನು ಸದಸ್ಯರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಜೊತೆಗೆ, ಆತನಿಗೆ ನೀಡಲಾಗಿದ್ದ ಸದಸ್ಯತ್ವ ಕಾರ್ಡ್ ಹಾಗೂ ಪ್ರವೇಶ ಕಾರ್ಡ್‌ಗಳನ್ನು ತಕ್ಷಣವೇ ರದ್ದುಪಡಿಸಲು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಸೂಚಿಸಲಾಗಿದೆ.

ಶೂ ಎಸೆದ ಘಟನೆಯ ಹಿನ್ನೆಲೆಯಲ್ಲಿ, 71 ವರ್ಷದ ಕಿಶೋರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣವನ್ನು ಪರಿಗಣಿಸಲಾಗುತ್ತಿದೆ. ಅಗತ್ಯ ಕಾನೂನು ಕ್ರಮ ಕೈಗೊಳ್ಳಲು ಅಟಾರ್ನಿ ಜನರಲ್‌ಗೆ ಪತ್ರ ಕಳುಹಿಸಲಾಗಿದೆ. ಇದೇ ವೇಳೆ, ಭಾರತೀಯ ಬಾರ್ ಕೌನ್ಸಿಲ್ ಕೂಡ ರಾಕೇಶ್ ಕಿಶೋರ್ ನನ್ನು ಅಮಾನತುಗೊಳಿಸಿದೆ.

ಯಾವುದೇ ರಾಜಕೀಯ ಸಂಬಂಧಗಳು ಅಥವಾ ಕ್ರಿಮಿನಲ್ ಹಿನ್ನೆಲೆಗಳಿಲ್ಲವೆಂದು ಹೇಳಿಕೊಂಡಿರುವ ಕಿಶೋರ್, “ಹಿಂದೂ ಧಾರ್ಮಿಕ ವಿಷಯಗಳಲ್ಲಿ ನ್ಯಾಯಾಂಗದ ನಿರಂತರ ಹಸ್ತಕ್ಷೇಪದಿಂದ ನಾನು ಭಾವನಾತ್ಮಕವಾಗಿ ನೋವು ಅನುಭವಿಸಿದ್ದೇನೆ. ಅದರಿಂದಲೇ ಈ ರೀತಿ ಮಾಡಿದ್ದೇನೆ. ನನಗೆ ಯಾವುದೇ ಪಶ್ಚಾತ್ತಾಪವಿಲ್ಲ” ಎಂದು ಸುದ್ದಿ ಸಂಸ್ಥೆ ANIಗೆ ಹೇಳಿಕೆ ನೀಡಿದ್ದನು.

ತನ್ನ ಅರ್ಜಿ ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಗವಾಯಿ ಮಾಡಿದ ಟಿಪ್ಪಣಿಯಿಂದ ಅವಮಾನವಾಯಿತು ಎಂದು ರಾಕೇಶ್ ಕಿಶೋರ್ ಆರೋಪಿಸಿದ್ದನು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News