ಮುಂದಿನ ಶೈಕ್ಷಣಿಕ ವರ್ಷದಿಂದ ಉತ್ತರಾಖಂಡ ಮದರಸಗಳಲ್ಲಿ ರಾಮಾಯಣ ಪಾಠ
ಸಾಂದರ್ಭಿಕ ಚಿತ್ರ PC: PTI
ಡೆಹ್ರಾಡೂನ್: ಉತ್ತರಾಖಂಡ ವಕ್ಫ್ ಮಂಡಳಿಯ ಅಧೀನದಲ್ಲಿರುವ ಎಲ್ಲ ಮದರಸಗಳಲ್ಲಿ ಮಾರ್ಚ್ ಅಥವಾ ಏಪ್ರಿಲ್ ನಿಂದ ಆರಂಭವಾಗುವ ಮುಂದಿನ ಶೈಕ್ಷಣಿಕ ವರ್ಷದಿಂದ ರಾಮಾಯಣ ಮತ್ತು ಸಂಸ್ಕೃತ ಬೋಧನೆ ಮಾಡಲು ನಿರ್ಧರಿಸಲಾಗಿದೆ. ಅಂತೆಯೇ ವಿದ್ಯಾರ್ಥಿಗಳ ದೇಹದಾರ್ಢ್ಯತೆ ಮತ್ತು ಶಿಸ್ತನ್ನು ಖಾತರಿಪಡಿಸುವ ಸಲುವಾಗಿ ನಿವೃತ್ತ ಸೇನಾ ಸಿಬ್ಬಂದಿಯನ್ನು ದೈಹಿಕ ಶಿಕ್ಷಣ ಶಿಕ್ಷಕರಾಗಿ ನೇಮಿಸಲು ಕೂಡಾ ನಿರ್ಧರಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
"ಶಿಕ್ಷಣವನ್ನು ಆಧುನೀಕರಿಸುವುದು, ವಿಸ್ತೃತ ಕಲಿಕಾ ಅವಕಾಶವನ್ನು ಒದಗಿಸುವುದು ಮತ್ತು ರಾಷ್ಟ್ರೀಯತೆಯ ಭಾವನೆಯನ್ನು ಬೆಳೆಸುವುದು ಈ ನೂತನ ಉಪಕ್ರಮದ ಉದ್ದೇಶವಾಗಿದೆ". ಈ ವರ್ಷದ ಅಂತ್ಯದ ಒಳಗಾಗಿ ಎಂಟರಿಂದ ಹತ್ತು ಮದರಸಗಳನ್ನು ಆಧುನೀಕರಿಸಲು ಉದ್ದೇಶಿಸಿದ್ದು, ಸಣ್ಣ ಮದರಸಗಳನ್ನು ವಿಲೀನಗೊಳಿಸಲಾಗುತ್ತದೆ. ಇದು ಆಡಳಿತವನ್ನು ಸುಲಲಿತಗೊಳಿಸಲು ಸಮತ್ತು ಆದಾಯವನ್ನು ಹೆಚ್ಚಿಸಲು ಖಾಲಿ ಆಸ್ತಿಗಳನ್ನು ಬಳಕೆ ಮಾಡಿಕೊಳ್ಳಲು ಅವಕಾಶ ನೀಡಲಿದೆ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಹದಾಬ್ ಶಮ್ಸ್ ಹೇಳಿದ್ದಾರೆ.
ಹೊಸ ಪಠ್ಯಕ್ರಮವನ್ನು ಆರಂಭದಲ್ಲಿ ಡೆಹ್ರಾಡೂನ್, ಹರಿದ್ವಾರ, ನೈನಿತಾಲ್ ಮತ್ತು ಉಧಾಂಸಿಂಗ್ ನಗರ ಜಿಲ್ಲೆಗಳ ನಾಲ್ಕು ಮದರಸಗಳಲ್ಲಿ ಆರಂಭಿಸಲಾಗುತ್ತದೆ. ಶಿಕ್ಷಕರ ನೇಮಕಾತಿ ಬಳಿಕ ಉಳಿದ 113 ಮದರಸಗಳಿಗೆ ಇದನ್ನು ವಿಸ್ತರಿಸಲಾಗುವುದು. ಉತ್ತರಾಖಂಡದಲ್ಲಿ ಪ್ರಸ್ತುತ 419 ಮದರಸಗಳಿದ್ದು, ಈ ಪೈಕಿ 117ನ್ನು ವಕ್ಫ್ ಮಂಡಳಿ ನಿರ್ವಹಿಸುತ್ತಿದೆ. ಡೆಹ್ರಾಡೂನ್ ಮುಸ್ಲಿಂ ಕಾಲೋನಿಯಲ್ಲಿರುವ ಮೊಟ್ಟಮೊದಲ ಮಾದರಿ ಮದರಸ ಮೇಲ್ದರ್ಜೆಗೇರುವ ಅಂತಿಮ ಹಂತದಲ್ಲಿದೆ.