ಮನುಷ್ಯರ ಜೀವಿತಾವಧಿ 100 ವರ್ಷಗಳಲ್ಲ, 200 ವರ್ಷ: ಚರ್ಚೆಗೆ ನಾಂದಿ ಹಾಡಿದ ಯೋಗ ಗುರು ರಾಮ್ ದೇವ್ ಹೇಳಿಕೆ
PC : ANI
ಹೊಸದಿಲ್ಲಿ: ನಟಿ ಶೆಫಾಲಿ ಜರಿವಾಲಾರ ಅಕಾಲಿಕ ನಿಧನದ ಬೆನ್ನಿಗೇ, ಮುಪ್ಪು ನಿರೋಧಕ ಔಷಧಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ, ಮನುಷ್ಯರ ಜೀವಿತಾವಧಿ 100 ವರ್ಷಗಳಲ್ಲ; ಬದಲಿಗೆ, ಸುಮಾರು 150-200 ವರ್ಷ ಎಂದು ಮಂಗಳವಾರ ಹೇಳಿರುವ ಯೋಗ ಗುರು ಬಾಬಾ ರಾಮ್ ದೇವ್, ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ.
ಕಳೆದ ಶುಕ್ರವಾರ ಹೃದಯ ಸ್ತಂಭನದಿಂದ ಮೃತಪಟ್ಟ 42 ವರ್ಷದ ಜರಿವಾಲ್, ನಿಯಮಿತವಾಗಿ ಮುಪ್ಪು ನಿರೋಧಕ ಔಷಧಗಳನ್ನು ಸೇವಿಸುತ್ತಿದ್ದರು ಎಂದು ವರದಿಯಾಗಿದೆ.
ಈ ಕುರಿತು NDTV ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ ಬಾಬಾ ರಾಮ್ ದೇವ್, “ಮನುಷ್ಯನ ನೈಸರ್ಗಿಕ ಜೀವಿತಾವಧಿ 100 ವರ್ಷಗಳಲ್ಲ. ಮನುಷ್ಯನ ನೈಸರ್ಗಿಕ ಜೀವಿತಾವಧಿ ಸುಮಾರು 150-200 ವರ್ಷಗಳು. ಆದರೆ, ನಾವು ಅದರ ಮೇಲೆ, ನಮ್ಮ ಮಿದುಳಿನ ಮೇಲೆ, ನಮ್ಮ ಹೃದಯದ ಮೇಲೆ, ನಮ್ಮ ಕಣ್ಣುಗಳ ಮೇಲೆ ಹಾಗೂ ನಮ್ಮ ಯಕೃತ್ತಿನ ಮೇಲೆ ತುಂಬಾ ಒತ್ತಡ ಹೇರುತ್ತಿದ್ದೇವೆ” ಎಂದು ಹೇಳಿದ್ದಾರೆ.
ಜನರು 100 ವರ್ಷಗಳಲ್ಲಿ ಸೇವಿಸಬೇಕಾದ ಆಹಾರವನ್ನು ಇಂದು ಕೇವಲ 25 ವರ್ಷಗಳಲ್ಲಿ ಸೇವಿಸುತ್ತಿದ್ದಾರೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
“ನಿಮಗೆ ನಿಮ್ಮನ್ನು ನೀವು ಹೇಗೆ ಚಟುವಟಿಕೆಯಿಂದ ಲವಲವಿಕೆಯಿಂದ ಇರಬೇಕು ಎಂಬುದು ತಿಳಿದಿಲ್ಲ. ನೀವು ಚೆನ್ನಾಗಿ ಕೆಲಸ ಮಾಡುತ್ತಿದ್ದರೆ, ನೀವು 100 ವರ್ಷಗಳಾದರೂ ವೃದ್ಧರಾಗುವುದಿಲ್ಲ ಎಂಬುದು ಸತ್ಯ” ಎಂದು ಹೇಳಿರುವ ಬಾಬಾ ರಾಮ್ ದೇವ್, ಅದಕ್ಕಾಗಿ ಆಹಾರದ ಶಿಸ್ತು ಮತ್ತು ಉತ್ತಮ ಜೀವನ ಶೈಲಿ ಅತ್ಯಗತ್ಯ ಎಂದೂ ಒತ್ತಿ ಹೇಳಿದ್ದಾರೆ.
‘ಕಾಂಟಾ ಲಗಾ’ ಗೀತೆಯ ಮೂಲಕ ಖ್ಯಾತರಾಗಿದ್ದ ಶೆಫಾಲಿ ಜರಿವಾಲಾ, ತಮ್ಮ ನಿವಾಸದಲ್ಲಿ ಎರಡು ಬಾಕ್ಸ್ ಗಳಲ್ಲಿ ಬಹುತೇಕ ಸ್ವಯಂ ಚಿಕಿತ್ಸೆಗಾಗಿ ಔಷಧಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಶೆಫಾಲಿ ಜರಿವಾಲಾರ ಮುಂಬೈ ನಿವಾಸಕ್ಕೆ ಭೇಟಿ ನೀಡಿದ್ದ ಪೊಲೀಸರು ಹಾಗೂ ವಿಧಿ ವಿಜ್ಞಾನ ತಜ್ಞರಿಗೆ ಅವರ ನಿವಾಸದಲ್ಲಿ ತ್ವಚೆ ಸೌಂದರ್ಯ ವರ್ಧಕ ಹಾಗೂ ವಿಷನಿರೋಧಕವಾಗಿ ಬಳಕೆಯಾಗುವ ಗ್ಲುಟಥಿಯೋನ್, ವಿಟಮಿನ್ ಸಿ ಚುಚ್ಚುಮದ್ದುಗಳು, ಆಮ್ಲೀಯತೆ ಶಮನಕಾರಿ ಮಾತ್ರೆಗಳು ಪತ್ತೆಯಾಗಿದ್ದವು. ಇವು ವೈದ್ಯರ ಸಲಹೆಯಿಲ್ಲದ, ಅಪಾಯಕಾರಿಯಾದ ಮುಪ್ಪು ನಿರೋಧಕ ಚಿಕಿತ್ಸೆಯತ್ತ ಬೊಟ್ಟು ಮಾಡಿದ್ದವು.