ರಣಜಿ ಟ್ರೋಫಿ: ಆಂಧ್ರ ನಾಯಕ ಸ್ಥಾನದಿಂದ ಕೆಳಗಿಳಿದ ಹನುಮ ವಿಹಾರಿ
ಹನುಮ ವಿಹಾರಿ | Photo: X
ಮುಂಬೈ: ಮುಂಬೈ ವಿರುದ್ಧದ ರಣಜಿ ಟ್ರೋಫಿ ಲೀಗ್ ಪಂದ್ಯದ ಮುನ್ನಾ ದಿನ ಆಂಧ್ರ ತಂಡದ ನಾಯಕ ಸ್ಥಾನದಿಂದ ಹನುಮ ವಿಹಾರಿ ಕೆಳಗಿಳಿದಿದ್ದಾರೆ. ನೂತನ ನಾಯಕನಾಗಿ ಹಿರಿಯ ಬ್ಯಾಟರ್ ರಿಕಿ ಭುಯಿಯನ್ನು ನೇಮಿಸಲಾಗಿದೆ.
ಆಂಧ್ರ ಮತ್ತು ಮುಂಬೈ ತಂಡಗಳ ನಡುವಿನ ಪಂದ್ಯವು ಮುಂಬೈಯ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ.
‘‘ವೈಯಕ್ತಿಕ ಕಾರಣಗಳಿಗಾಗಿ ಅವರು ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅವರು ತನ್ನ ಬ್ಯಾಟಿಂಗ್ ಮೇಲೆ ಹೆಚ್ಚಿನ ಗಮನ ನೀಡಲು ಬಯಸಿದ್ದಾರೆ. ಅವರ ನಿರ್ಧಾರಕ್ಕೆ ಇದುವೇ ಕಾರಣ’’ ಎಂದು ನೂತನ ನಾಯಕ ಭುಯಿ ಹೇಳಿದರು. ತನ್ನ ತಂಡದ ಸದಸ್ಯರು ನೆಟ್ ಅಭ್ಯಾಸ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದರು.
ಹಾಲಿ ಕ್ರಿಕೆಟ್ ಋತು ಆರಂಭಗೊಳ್ಳುವುದಕ್ಕೂ ಮೊದಲು ವಿಹಾರಿ ಆಂಧ್ರ ತಂಡದಿಂದ ಹೊರಹೋಗುವುದರಲ್ಲಿದ್ದರು. ಆದರೆ, ಆಂಧ್ರ ಕ್ರಿಕೆಟ್ ಅಸೋಸಿಯೇಶನ್ ಅವರನ್ನು ಉಳಿಸಿಕೊಂಡಿತ್ತು. ಹಿಂದಿನ ರಣಜಿ ಋತುವಿನಲ್ಲಿ ಆಂಧ್ರ ತಂಡವು ಕ್ವಾರ್ಟರ್ಫೈನಲ್ ತಲುಪಿದ ಹಿನ್ನೆಲೆಯಲ್ಲಿ ಅವರು ನಾಯಕತ್ವ ವಹಿಸಿಕೊಳ್ಳುವ ನಿರೀಕ್ಷೆಯಿತ್ತು.