×
Ad

ವೈದ್ಯೆಯ ಅತ್ಯಾಚಾರ-ಹತ್ಯೆ | ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಕಿರಿಯ ವೈದ್ಯರ ಪ್ರತಿಭಟನೆ

Update: 2024-09-04 20:46 IST

PC ; PTI 

ಕೋಲ್ಕತಾ : ಕಳೆದ ತಿಂಗಳು ಇಲ್ಲಿಯ ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಹತ್ಯೆಯನ್ನು ವಿರೋಧಿಸಿ ಪ.ಬಂಗಾಳದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಕಿರಿಯ ವೈದ್ಯರ ಪ್ರತಿಭಟನೆ ಬುಧವಾರವೂ ಮುಂದುವರಿದಿದೆ.

ಕಳೆದ ಮೂರು ವಾರಗಳಿಂದಲೂ ನಡೆಯುತ್ತಿರುವ ಕಿರಿಯ ವೈದ್ಯರ ಮುಷ್ಕರದಿಂದಾಗಿ ಹೆಚ್ಚಿನ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆಗಳಿಗೆ ವ್ಯತ್ಯಯವುಂಟಾಗಿದೆ.

‘ನ್ಯಾಯಕ್ಕಾಗಿ ನಮ್ಮ ಬೇಡಿಕೆ ಇನ್ನೂ ಈಡೇರಿಲ್ಲ. ನಮ್ಮ ಸೋದರಿಗೆ ನ್ಯಾಯ ದೊರೆಯುವವರೆಗೆ ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನುಕ್ರಮಗಳನ್ನು ಕೈಗೊಳ್ಳುವವರೆಗೆ ಪ್ರತಿಭಟನೆಗಳು ಮುಂದುವರಿಯುತ್ತವೆ ’ಎಂದು ಕಿರಿಯ ವೈದ್ಯರೋರ್ವರು ಹೇಳಿದರು.

ಕೋಲ್ಕತಾ ಪೋಲಿಸ್ ಆಯುಕ್ತ ವಿನೀತ ಗೋಯಲ್ ರಾಜೀನಾಮೆ ನೀಡಬೇಕೆಂಬ ಪ್ರತಿಭಟನಾನಿರತ ರೈತರ ಇನ್ನೊಂದು ಬೇಡಿಕೆಯೂ ಈಡೇರಿಲ್ಲ ಎಂದರು.

ಆ.9ರಂದು ನಡೆದಿದ್ದ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನು ಕಲಕತ್ತಾ ಉಚ್ಚ ನ್ಯಾಯಾಲಯವು ಸಿಬಿಐಗೆ ಹಸ್ತಾಂತರಿಸುವ ಮುನ್ನ ಪೋಲಿಸರು ಸೂಕ್ತ ತನಿಖೆಯನ್ನು ನಡೆಸಿರಲಿಲ್ಲ ಎಂದು ಪ್ರತಿಭಟನಾನಿರತರು ಆರೋಪಿಸಿದ್ದಾರೆ.

‘ಈ ಪ್ರಕರಣದಲ್ಲಿ ಹಲವರನ್ನು ರಕ್ಷಿಸಲಾಗುತ್ತಿದೆ ಎಂದು ನಾವು ಭಾವಿಸಿದ್ದೇವೆ. ಸತ್ಯ ಹೊರಗೆ ಬರಲೇಬೇಕು’ ಎಂದು ಇನ್ನೋರ್ವ ಕಿರಿಯ ವೈದ್ಯರು ಹೇಳಿದರು.

ಕಿರಿಯ ವೈದ್ಯೆಯ ಶವವು ಪತ್ತೆಯಾದ ಬಳಿಕ ಸಂಜಯ ರಾಯ್ ಎಂಬ ನಾಗರಿಕ ಸ್ವಯಂಸೇವಕನನ್ನು ಬಂಧಿಸಲಾಗಿತ್ತು. ಸಿಬಿಐ ಹಣಕಾಸು ಅಕ್ರಮಗಳಿಗಾಗಿ ಆರ್‌ಜಿ ಕರ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ ಘೋಷ ಮತ್ತು ಇತರ ಮೂವರನ್ನೂ ಬಂಧಿಸಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News