×
Ad

ಗೋವಾ | ಮೂವರು ಬಾಲಕಿಯರ ಅತ್ಯಾಚಾರ ಪ್ರಕರಣ: ಅತಿಥಿ ಗೃಹದ ಮಾಲಕ, ವ್ಯವಸ್ಥಾಪಕನ ಬಂಧನ

Update: 2025-06-12 13:40 IST

ಸಾಂದರ್ಭಿಕ ಚಿತ್ರ (PTI)

ಪಣಜಿ: ಉತ್ತರ ಗೋವಾದಲ್ಲಿನ ಅತಿಥಿ ಗೃಹವೊಂದರಲ್ಲಿ ಮೂವರು ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಅತಿಥಿ ಗೃಹದ ಮಾಲಕ ಹಾಗೂ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದು, ಇಲ್ಲಿಯವರೆಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. 

ಕಲಾಂಗ್ಯೂಟ್ ಪ್ರದೇಶದಲ್ಲಿರುವ ಅತಿಥಿ‌ ಗೃಹಕ್ಕೆ ಒಟ್ಟಿಗೆ ಬಾಡಿಗೆಗೆ ಬಂದಿದ್ದ ಐವರ ಪೈಕಿ ಇಬ್ಬರು ಅದೇ ಅತಿಥಿ ಗೃಹದಲ್ಲಿ ವಾಸಿಸುತ್ತಿದ್ದ 11 ವರ್ಷ, 13 ವರ್ಷ ಹಾಗೂ 15 ವರ್ಷದ ಅಪ್ರಾಪ್ತ ಬಾಲಕಿಯರ ಮೇಲೆ ಇಬ್ಬರು ಜೂನ್ 7 ಹಾಗೂ 8ರಂದು ಅತ್ಯಾಚಾರ ನಡೆಸಿದ್ದರು ಎಂದು ಆರೋಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಅತ್ಯಾಚಾರಕ್ಕೀಡಾಗಿದ್ದವರಲ್ಲಿ ಇಬ್ಬರು ಸಹೋದರಿಯರಾಗಿದ್ದಾರೆ.

ನಮ್ಮ ಪುತ್ರಿಯರು ನಾಪತ್ತೆಯಾಗಿದ್ದಾರೆ ಎಂದು ಬಾಲಕಿಯರ ಪೋಷಕರು ಜೂನ್ 8ರಂದು ದೂರು ದಾಖಲಿಸಿದ್ದರು.

ದೂರು ದಾಖಲಾಗುತ್ತಿದ್ದಂತೆಯೇ ಹಲವು ತಂಡಗಳನ್ನು ರಚಿಸಿದ್ದ ಪೊಲೀಸರು, ಅಂದೇ ಅವರನ್ನೆಲ್ಲ ರಕ್ಷಿಸಿದ್ದರು. ಇದರೊಂದಿಗೆ, ಆರೋಪಿಗಳಾದ ಅಲ್ತಾಫ್ ಮುಜಾವರ್ (19) ಹಾಗೂ ಓಂ ನಾಯ್ಕ್ (21) ಅನ್ನೂ ಬಂಧಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತಿಬ್ಬರು ಆರೋಪಿಗಳಾದ ಅತಿಥಿ ಗೃಹದ ಮಾಲಕ ರಜತ್ ಚೌಹಾಣ್ (31) ಹಾಗೂ ವ್ಯವಸ್ಥಾಪಕ ಮನ್ಸೂರ್ ಪೀರ್ (35) ನನ್ನು ಬುಧವಾರ ರಾತ್ರಿ ಬಂಧಿಸಲಾಗಿದೆ ಎಂದು ಗುರುವಾರ ಉತ್ತರ ಗೋವಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಗುಪ್ತಾ PTI ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

ಅವರಿಬ್ಬರನ್ನು ಪೋಷಕರ ಸಮ್ಮತಿ ಇಲ್ಲದೆ ಅತಿಥಿ ಗೃಹದಲ್ಲಿ ವಸತಿ ಅವಕಾಶ ಕಲ್ಪಿಸಿ, ಆ ಮೂಲಕ ಕಾನೂನು ಉಲ್ಲಂಘಿಸಿದ ಹಾಗೂ ಅಪರಾಧಕ್ಕೆ ಪ್ರಚೋದನೆ ನೀಡಿದ ಆರೋಪದ‌ ಮೇಲೆ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಎಲ್ಲ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳು ಹಾಗೂ ಪೋಕ್ಸೊ ಕಾಯ್ದೆ ಹಾಗೂ ಗೋವಾ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News