×
Ad

ದಿಲ್ಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟ; ಕನಿಷ್ಠ ಎಂಟು ಮಂದಿ ಮೃತ್ಯು, ಹೈ ಅಲರ್ಟ್ ಘೋಷಣೆ

Update: 2025-11-10 20:33 IST

Photo Credit : X \ @the_hindu

ಹೊಸದಿಲ್ಲಿ: ರಾಜಧಾನಿ ದಿಲ್ಲಿಯ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಸೋಮವಾರ ಸಂಜೆ ಸಂಭವಿಸಿದ ಭಾರೀ ಕಾರು ಸ್ಫೋಟದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ತೀವ್ರತೆಯಿಂದಾಗಿ ಸುತ್ತಮುತ್ತಲಿನ ಹಲವಾರು ವಾಹನಗಳು ಬೆಂಕಿಗೆ ಆಹುತಿಯಾಗಿದ್ದು, ಪ್ರದೇಶದಲ್ಲಿ ಭೀತಿಯ ವಾತಾವರಣ ಆವರಿಸಿದೆ.

ಸೋಮವಾರ ಸಂಜೆ 6.30ರ ಸುಮಾರಿಗೆ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಅಚಾನಕ್ ಸ್ಫೋಟ ಸಂಭವಿಸಿದೆ. ಜೋರಾದ ಸ್ಫೋಟದ ಶಬ್ದದ ಬಳಿಕ ಬೆಂಕಿಯ ಜ್ವಾಲೆಗಳು ಕಂಡು ಬಂದಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಥಳದಲ್ಲಿದ್ದ ಅನೇಕರಿಗೆಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ನಂತರ ದಿಲ್ಲಿ ಪೊಲೀಸರು ನಗರದಲ್ಲಿ ಹೈ ಅಲರ್ಟ್ ಘೋಷಿಸಿದ್ದು, ಪ್ರದೇಶವನ್ನು ಸಂಪೂರ್ಣ ಸುತ್ತುವರೆದು ಭದ್ರತೆ ಹೆಚ್ಚಿಸಲಾಗಿದೆ. ಏಳು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿವೆ ಎಂದು ದಿಲ್ಲಿ ಅಗ್ನಿಶಾಮಕ ಸೇವೆಗಳು ತಿಳಿಸಿವೆ.

“ರೆಡ್ ಫೋರ್ಟ್ ಮೆಟ್ರೋ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ತೀವ್ರತೆ ಬಹಳ ಹೆಚ್ಚಿದ್ದರಿಂದ, ಗಾಯಗಳಾಗುವ ಸಾಧ್ಯತೆ ಇದೆ,” ಎಂದು ಅಗ್ನಿಶಾಮಕ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸ್ಫೋಟದ ನಂತರದ ದೃಶ್ಯಗಳಲ್ಲಿ ಉರಿಯುತ್ತಿರುವ ಕಾರುಗಳು, ದಟ್ಟ ಹೊಗೆ ಆವರಿಸುತ್ತಿರುವುದು ಕಂಡುಬಂದಿದೆ. ಬಾಂಬ್ ನಿಷ್ಕ್ರಿಯ ದಳ ಹಾಗೂ ಅಪರಾಧ ತನಿಖಾ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿವೆ.

ಸ್ಫೋಟದ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷವೋ ಅಥವಾ ಉದ್ದೇಶಿತ ಕೃತ್ಯವೋ ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News