ಸೆ.1 ರ ಬಳಿಕ ರಿಜಿಸ್ಟರ್ಡ್ ಪೋಸ್ಟ್ ಬರಲ್ಲ
ಭಾರತೀಯ ಅಂಚೆ ಇಲಾಖೆ | PC : indiapost.gov.in
ಹೊಸದಿಲ್ಲಿ, ಆ. 2: ರಿಜಿಸ್ಟರ್ಡ್ ಪೋಸ್ಟ್ ಸೇವೆ ಮತ್ತು ಸ್ಪೀಡ್ ಪೋಸ್ಟ್ ಸೇವೆ ಸೆಪ್ಟಂಬರ್ ಒಂದರಿಂದ ವಿಲೀನಗೊಳ್ಳಲಿದೆ ಎಂದು ಅಂಚೆ ಇಲಾಖೆಯು ತನ್ನ ಜುಲೈ 2ರ ಆಂತರಿಕ ಸುತ್ತೋಲೆಯೊಂದರಲ್ಲಿ ತಿಳಿಸಿದೆ. ವಿಲೀನದಿಂದಾಗಿ ಭಾರತೀಯ ಅಂಚೆ ಇಲಾಖೆಯ ಅತ್ಯಂತ ಹಳೆಯ ಸೇವೆಯೊಂದು ಕೊನೆಗೊಂಡಿದೆ.
ಇನ್ನು ರಿಜಿಸ್ಟರ್ಡ್ ಪೋಸ್ಟ್ ನ ಸ್ಥಾನವನ್ನು ಸ್ಪೀಡ್ ಪೋಸ್ಟ್ ಆಕ್ರಮಿಸಿಕೊಳ್ಳಲಿದೆ. ಸ್ಪೀಡ್ ಪೋಸ್ಟ್ ಸೇವೆಯು ನಿರ್ದಿಷ್ಟ ವ್ಯಕ್ತಿಯ ವಶಕ್ಕೆ ಸರಕುಗಳನ್ನು ವೇಗವಾಗಿ ದಾಖಲೆ ಸಮೇತವಾಗಿ ತಲುಪಿಸಲಿದೆ.
‘‘ರವಾನೆ ಸೇವೆಗಳನ್ನು ಸುಲಲಿತಗೊಳಿಸುವ, ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುವ, ಜಾಡು ಪತ್ತೆ ವ್ಯವಸ್ಥೆಯನ್ನು ಸುಧಾರಿಸುವ ಮತ್ತು ಗ್ರಾಹಕ ಸಂತೃಪ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದರ ಪ್ರಕಾರ, ಒಂದೇ ರೀತಿಯ ಸೇವೆಗಳನ್ನು ಏಕೀಕೃತ ಚೌಕಟ್ಟಿನೊಳಗೆ ತರಲಾಗುವುದು’’ ಎಂದು ಅಂಚೆ ಇಲಾಖೆಯ ಸುತ್ತೋಲೆ ತಿಳಿಸಿದೆ.