×
Ad

ಭಾರತದಲ್ಲಿ ಫಾಲ್ಕನ್ 2000 ವಿಮಾನ ನಿರ್ಮಿಸುವ ಒಪ್ಪಂದಕ್ಕೆ ರಿಲಯನ್ಸ್, ಡಸಾಲ್ಟ್ ಸಹಿ

Update: 2025-06-18 21:00 IST

PC : @Tar21Operator

ಮುಂಬೈ: ಫ್ರಾನ್ಸ್‌ನ ವಿಮಾನ ತಯಾರಿಕಾ ಕಂಪೆನಿ ಡಸಾಲ್ಟ್ ಏವಿಯೇಶನ್‌ನ ಫಾಲ್ಕನ್ 2000 ವಿಮಾನಗಳನ್ನು ಭಾರತದಲ್ಲಿ ನಿರ್ಮಿಸುವ ಒಪ್ಪಂದಕ್ಕೆ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ಅಂಗಸಂಸ್ಥೆ ರಿಲಯನ್ಸ್ ಏರೋಸ್ಟ್ರಕ್ಚರ್ ಮತ್ತು ಡಸಾಲ್ಟ್ ಏವಿಯೇಶನ್ ಸಹಿ ಹಾಕಿವೆ.

ಮೊದಲ ಫಾಲ್ಕನ್ 2000 ವಿಮಾನಗಳು ರಿಲಯನ್ಸ್ ಏರೋಸ್ಟ್ರಕ್ಚರ್‌ನ ನಾಗಪುರದಲ್ಲಿರುವ ಕಾರ್ಖಾನೆಯಿಂದ 2028ರಲ್ಲಿ ಹೊರಬರುವ ನಿರೀಕ್ಷೆಯಿದೆ. ಫಾಲ್ಕನ್ ವಿಮಾನವೊಂದು ಸಂಪೂರ್ಣವಾಗಿ ಫ್ರಾನ್ಸ್‌ನ ಹೊರಗೆ ನಿರ್ಮಾಣವಾಗುತ್ತಿರುವುದು ಡಸಾಲ್ಟ್‌ನ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ.

ಈ ಘೋಷಣೆಯ ಬಳಿಕ, ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್‌ನ ಶೇರುಗಳ ಬೆಲೆ ಬುಧವಾರ ಬಾಂಬೆ ಶೇರು ವಿನಿಮಯದಲ್ಲಿ 5 ಶೇಕಡದಷ್ಟು ಏರಿ ಅಪ್ಪರ್ ಸರ್ಕೀಟ್ ತಲುಪಿತು.

‘‘ಭಾರತದಲ್ಲಿ ತಯಾರಾಗುವ ಫಾಲ್ಕನ್ 2000 ವಿಮಾನಗಳು ದೇಶದ ತಾಂತ್ರಿಕ ಉನ್ನತಿ ಮತ್ತು ಉತ್ಪಾದನಾ ಸಾಮರ್ಥ್ಯದ ಹೆಮ್ಮೆಯ ಸಂಕೇತವಾಗಲಿದೆ. ಜಾಗತಿಕ ವಾಯುಕ್ಷೇತ್ರದ ಕೇಂದ್ರ ಸ್ಥಾನದಲ್ಲಿ ಭಾರತವನ್ನು ಇರಿಸಲು ನಾವು ಕೆಲಸ ಮಾಡುತ್ತೇವೆ’’ ಎಂದು ಅನಿಲ್ ಅಂಬಾನಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಬುಧವಾರದ ಘೋಷಣೆಯ ಬಳಿಕ, ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಇಂಜಿನಿಯರ್‌ಗಳನ್ನು ನೇಮಿಸಲೂ ಡಸಾಲ್ಟ್ ಏವಿಯೇಶನ್ ನಿರ್ಧರಿಸಿದೆ.

ಎರಡು ಕಂಪೆನಿಗಳ ನಡುವಿನ ಇನ್ನೊಂದು ಜಂಟಿ ಯೋಜನೆ ಡಸಾಲ್ಟ್ ರಿಲಯನ್ಸ್ ಏವಿಯೇಶನ್ ಲಿಮಿಟೆಡ್ (ಡಿಆರ್‌ಎಎಲ್), ಫಾಲ್ಕನ್ ವಿಮಾನಗಳ ಕಾಕ್‌ಪಿಟ್ ಮತ್ತು ಇತರ ಬಿಡಿಭಾಗಗಳ ನಿರ್ಮಾಣವನ್ನು ಈಗಾಗಲೇ ಆರಂಭಿಸಿದೆ.

ಫಾಲ್ಕನ್ 8ಎಕ್ಸ್ ಮತ್ತು ಫಾಲ್ಕನ್ 6ಎಕ್ಸ್ ವಿಮಾನಗಳ ಮುಂಭಾಗ ಹಾಗೂ ಫಾಲ್ಕನ್ 2000 ವಿಮಾನಗಳ ರೆಕ್ಕೆಗಳು ಮತ್ತು ಸಂಪೂರ್ಣ ಒಡಲಿನ ಜೋಡಣೆಯನ್ನು ಡಸಾಲ್ಟ್ ಕಂಪೆನಿಯು ಡಿಆರ್‌ಎಎಲ್‌ಗೆ ವಹಿಸಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News