ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ರೂ. 375 ಕೋಟಿ ದೇಣಿಗೆ ನೀಡಿರುವ ರಿಲಯನ್ಸ್ ನೊಂದಿಗೆ ಸಂಪರ್ಕ ಹೊಂದಿರುವ ಸಂಸ್ಥೆಗಳು
Image Source : PTI
ಹೊಸದಿಲ್ಲಿ: ರಿಲಯನ್ಸ್ ಸಮೂಹ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರುವ, ಅಷ್ಟೇನೂ ಚಿರಪರಿಚಿತವಲ್ಲದ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಚುನಾವಣಾ ಬಾಂಡ್ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ರೂ. 375 ಕೋಟಿ ಮೊತ್ತದ ದೇಣಿಗೆ ನೀಡಿರುವುದು ಮಾರ್ಚ್ 21ರಂದು ಚುನಾವಣಾ ಆಯೋಗವು ಹೊಸದಾಗಿ ಬಿಡುಗಡೆ ಮಾಡಿರುವ ದತ್ತಾಂಶಗಳಿಂದ ಬಹಿರಂಗಗೊಂಡಿದೆ. ಈ ಸಂಸ್ಥೆಯು ಖರೀದಿ ಮಾಡಿರುವ ಉಳಿದ ರೂ. 35 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳು ಶಿವಸೇನೆ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಎನ್ ಸಿ ಪಿ)ದೊಂದಿಗೆ ಹಂಚಿಕೆಯಾಗಿವೆ.
ಜನವರಿ 5, 2022ರಂದು ರೂ. 225 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಈ ಸಂಸ್ಥೆ ಖರೀದಿಸಿದ್ದು, ಈ ಪೈಕಿ ರೂ. 200 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಜನವರಿ 10, 2022ರಂದು ಬಿಜೆಪಿಯು ನಗದೀಕರಿಸಿಕೊಂಡಿದೆ. ಉಳಿದ ರೂ. 25 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಜನವರಿ 6, 2022ರಂದು ಶಿವಸೇನೆಯು ನಗದೀಕರಿಸಿಕೊಂಡಿದೆ.
ಜನವರಿ 10, 2022ರಂದು ಕ್ವಿಕ್ ಸಪ್ಲೈ ಸಂಸ್ಥೆಯು ರೂ. 10 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಅನ್ನು ಖರೀದಿಸಿದೆ. ಈ ಚುನಾವಣಾ ಬಾಂಡ್ ಗಳನ್ನು ಜನವರಿ 11, 2022ರಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ(ಎನ್ ಸಿ ಪಿ)ವು ನಗದೀಕರಿಸಿಕೊಂಡಿದೆ.
11 ತಿಂಗಳ ನಂತರ, ನವೆಂಬರ್ 1, 2022ರಂದು ರೂ. ಒಂದು ಕೋಟಿ ಮುಖಬೆಲೆಯ 125 ಚುನಾವಣಾ ಬಾಂಡ್ ಗಳನ್ನು ಕ್ವಿಕ್ ಸಪ್ಲೈ ಸಂಸ್ಥೆ ಖರೀದಿಸಿದೆ. ಈ ಎಲ್ಲ ಚುನಾವಣಾ ಬಾಂಡ್ ಗಳನ್ನು ನವೆಂಬರ್ 14, 2022ರಂದು ಬಿಜೆಪಿ ನಗದೀಕರಿಸಿಕೊಂಡಿದೆ.
ಒಂದು ವರ್ಷದ ಬಳಿಕ, ನವೆಂಬರ್ 17, 2023ರಂದು ಕ್ವಿಕ್ ಸಪ್ಲೈ ಸಂಸ್ಥೆಯು ಮತ್ತೆ ರೂ. 50 ಕೋಟಿ ಮೌಲ್ಯದ ಚುನಾವಣಾ ಬಾಂಡ್ ಗಳನ್ನು ಖರೀದಿಸಿದೆ. ಆ ಚುನಾವಣಾ ಬಾಂಡ್ ಗಳನ್ನು ನವೆಂಬರ್ 20, 2023ರಂದು ಬಿಜೆಪಿಯು ನಗದೀಕರಿಸಿಕೊಂಡಿದೆ.
ಕ್ವಿಕ್ ಸಪ್ಲೈ ಸಂಸ್ಥೆಯ ಶೇ. 50ಕ್ಕೂ ಹೆಚ್ಚು ಪಾಲನ್ನು ರಿಲಯನ್ಸ್ ಸಮೂಹ ಸಂಸ್ಥೆಗಳು ಹೊಂದಿವೆ ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. ಕ್ವಿಕ್ ಸಪ್ಲೈ ಸಂಸ್ಥೆಯ ಮೂವರು ನಿರ್ದೇಶಕರ ಪೈಕಿ ಓರ್ವ ನಿರ್ದೇಶಕರಾದ ತಪಸ್ ಮಿತ್ರ ರಿಲಯನ್ಸ್ ಆಯಿಲ್ ಆ್ಯಂಡ್ ಪೆಟ್ರೋಲಿಯಂ, ರಿಲಯನ್ಸ್ ಎರೋಸ್ ಪ್ರೊಡಕ್ಷನ್ಸ್, ರಿಲಯನ್ಸ್ ಪೋಟೊ ಫಿಲ್ಮ್ಸ್, ರಿಲಯನ್ಸ್ ಫೈರ್ ಬ್ರಿಗೇಡ್ಸ್ ಹಾಗೂ ರಿಲಯನ್ಸ್ ಪಾಲಿಯೆಸ್ಟರ್ ಸಂಸ್ಥೆಯಲ್ಲಿ ನಿರ್ದೇಶಕರಾಗಿದ್ದಾರೆ. ಅವರ ಲಿಂಕ್ಡ್ ಇನ್ ಸ್ವವಿವರಗಳ ಪ್ರಕಾರ, ಅವರು ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯಲ್ಲಿ ಲೆಕ್ಕಪತ್ರ (ಕ್ರೋಡೀಕೃತ) ವಿಭಾಗದ ಮುಖ್ಯಸ್ಥರಾಗಿದ್ದಾರೆ.
ಈ ಕುರಿತು PTI ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ರಿಲಯನ್ಸ್ ಸಮೂಹ ಸಂಸ್ಥೆಗಳ ವಕ್ತಾರರು, “ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಯಾವುದೇ ರಿಲಯನ್ಸ್ ಸಂಸ್ಥೆಯ ಅಂಗ ಸಂಸ್ಥೆಯಲ್ಲ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಸೌಜನ್ಯ: scroll.in