×
Ad

ರಾಹುಲ್ ಗಾಂಧಿ ನೇತೃತ್ವದ ಯಾತ್ರೆಗೆ ಮರು ನಾಮಕರಣ

Update: 2024-01-04 22:23 IST

 ರಾಹುಲ್ ಗಾಂಧಿ | Photo: PTI 

ಹೊಸದಿಲ್ಲಿ: ಜನವರಿ 14ರಂದು ಆರಂಭವಾಗಲಿರುವ ರಾಹುಲ್ ಗಾಂಧಿ ನೇತೃತ್ವದ ಮಣಿಪುರ-ಮುಂಬೈ ಯಾತ್ರೆಗೆ ‘ಭಾರತ್ ಜೋಡೋ ನ್ಯಾಯ ಯಾತ್ರೆʼ ಎಂದು ಕಾಂಗ್ರೆಸ್ ಗುರುವಾರ ಮರು ನಾಮಕರಣ ಮಾಡಿದೆ.

ಕಾಂಗ್ರೆಸ್ ಪಕ್ಷದ ಇಲ್ಲಿನ ಕೇಂದ್ರ ಕಚೇರಿಯಲ್ಲಿ ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು, ರಾಜ್ಯ ಘಟಕದ ಮುಖ್ಯಸ್ಥರು ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಸಭೆಯ ಬಳಿಕ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಈ ಘೋಷಣೆ ಮಾಡಿದರು.

ಈ ಹಿಂದೆ ಈ ಯಾತ್ರೆಗೆ ‘ಭಾರತ್ ನ್ಯಾಯ ಯಾತ್ರೆ’ಎಂದು ಹೆಸರಿಡಲಾಗಿತ್ತು. ಈ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ‘ಇಂಡಿಯಾ’ ಮೈತ್ರಿಕೂಟದ ನಾಯಕರಿಗೆ ಕಾಂಗ್ರೆಸ್ ಆಹ್ವಾನ ನೀಡಿದೆ. ಅದಕ್ಕಾಗಿ ಆಹ್ವಾನ ಪತ್ರಿಕೆಯನ್ನು ಕಳುಹಿಸಲಾಗುತ್ತಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.

ಈ ಯಾತ್ರೆ 15 ರಾಜ್ಯಗಳ ಮೂಲಕ ಸಾಗಲಿದೆ. 6,713 ಕಿಮೀ. ದೂರವನ್ನು ಬಸ್ ಹಾಗೂ ಕಾಲ್ನಡಿಗೆ ಮೂಲಕ ಕ್ರಮಿಸಲಿದೆ. 110 ಜಿಲ್ಲೆಗಳು, 100 ಲೋಕಸಭಾ ಕ್ಷೇತ್ರಗಳು ಹಾಗೂ 337 ವಿಧಾನ ಸಭಾ ಕ್ಷೇತ್ರಗಳನ್ನು ಹಾದು ಹೋಗಲಿದೆ ಎಂದು ಅವರು ತಿಳಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News