ರೇಣುಕಾ ಸ್ವಾಮಿ ಹತ್ಯೆ ಪ್ರಕರಣ | ನಟ ದರ್ಶನ್ ಜಾಮೀನಿಗೆ ಸುಪ್ರೀಂ ಕೋರ್ಟ್ ಅಸಮಾಧಾನ
ನಟ ದರ್ಶನ್
ಹೊಸದಿಲ್ಲಿ, ಜು. 17: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಮಂಜೂರು ಮಾಡಿದ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಅಸಮಾಧಾನ ವ್ಯಕ್ತಪಡಿಸಿದೆ.
ದರ್ಶನ್ ಗೆ ಜಾಮೀನು ಮಂಜೂರು ಮಾಡಿ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ಗ್ ಸಲ್ಲಿಸಿದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲ ಹಾಗೂ ಆರ್. ಮಹಾದೇವನ್ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಿತು.
ಕರ್ನಾಟಕ ಉಚ್ಚ ನ್ಯಾಯಾಲಯ ತನ್ನ ವಿವೇಚನೆಯನ್ನು ಬಳಸಿದ ರೀತಿಯ ಬಗ್ಗೆ ತನಗೆ ಸಮಾಧಾನವಾಗಿಲ್ಲ ಎಂದು ಪೀಠ ಹೇಳಿತು. ಅಲ್ಲದೆ, ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಯಾಕೆ ಮಧ್ಯಪ್ರವೇಶಿಸಬಾರದು ಎಂಬುದಕ್ಕೆ ಬಲವಾದ ಕಾರಣಗಳನ್ನು ನೀಡುವಂತೆ ದರ್ಶನ್ ಪರ ವಕೀಲ ಕಪಿಲ್ ಸಿಬಲ್ ಅವರಿಗೆ ತಿಳಿಸಿತು.
ನಿಮ್ಮಲ್ಲಿ ಪ್ರಾಮಾಣಿಕವಾಗಿ ಹೇಳುವುದಾದರೆ, ಉಚ್ಚ ನ್ಯಾಯಾಲಯ ವಿವೇಚನೆಯನ್ನು ಬಳಸಿದ ರೀತಿ ಬಗ್ಗೆ ನಮಗೆ ಸಮಾಧಾನವಾಗಿಲ್ಲ. ನಾವು ತುಂಬಾ ಪ್ರಾಮಾಣಿಕವಾಗಿ ಇದನ್ನು ಹೇಳುತ್ತೇವೆ ಎಂದು ಪೀಠ ಕಪಿಲ್ ಸಿಬಲ್ ಅವರಿಗೆ ತಿಳಿಸಿತು.
ನಿಮ್ಮ ಕಕ್ಷಿದಾರರು ಜಾಮೀನು ಪಡೆದಿದ್ದಾರೆ. ಉಚ್ಚ ನ್ಯಾಯಾಲಯ ಯಾವ ರೀತಿ ಆದೇಶ ನೀಡಿದೆ ಎಂಬುದು ನಿಮಗೆ ತಿಳಿದಿದೆ. ಆದುದರಿಂದ ನಾವು ನಿಮ್ಮ ಆದೇಶವನ್ನು ಆಲಿಸುತ್ತೇವೆ ಎಂದು ಪೀಠ ಹೇಳಿತು.
ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್, ಉಚ್ಚ ನ್ಯಾಯಾಲಯದ ಆದೇಶವನ್ನು ಪರಿಗಣಿಸದೆ ಸುಪ್ರೀಂ ಕೋರ್ಟ್ ಸಿಸಿಪಿ ಸೆಕ್ಷನ್ 161 ಹಾಗೂ 164ರ ಅಡಿಯಲ್ಲಿ ದಾಖಲಿಸಲಾದ ಹೇಳಿಕೆಗಳನ್ನು ಹಾಗೂ ಪೊಲೀಸರು ಸೇರಿದಂತೆ ಎರಡರಿಂದ ಮೂರು ಮಂದಿ ಪ್ರಮುಖ ಸಾಕ್ಷಿಗಳ ಸಾಕ್ಷ್ಯಗಳನ್ನು ಪರಿಶೀಲಿಸುವಂತೆ ಕೋರಿದರು.
ಅನಂತರ ಪೀಠ ವಿಚಾರಣೆಯನ್ನು ಜುಲೈ 22ಕ್ಕೆ ಮುಂದೂಡಿತು.