ಸಂವಿಧಾನದ 370ನೇ ವಿಧಿ ರದ್ದತಿ: ಜು.11ರಂದು ಅರ್ಜಿಗಳ ವಿಚಾರಣೆ ಕೈಗೆತ್ತಿಕೊಳ್ಳಲಿರುವ ಸುಪ್ರೀಂ ಕೋರ್ಟ್
Update: 2023-07-03 22:48 IST
ಸುಪ್ರೀಂ ಕೋರ್ಟ್ | Photo: PTI
ಹೊಸದಿಲ್ಲಿ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಜು.11ರಂದು ಕೈಗೆತ್ತಿಕೊಳ್ಳಲಿದೆ.
ಐವರು ನ್ಯಾಯಾಧೀಶರ ಸಂವಿಧಾನ ಪೀಠವು ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಸಂಜೀವ ಖನ್ನಾ, ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ ಅವರನ್ನೂ ಒಳಗೊಂಡಿರಲಿದೆ.
ವಿಧಿ 370 ಪ್ರಕರಣವು ಎರಡು ವರ್ಷಗಳಿಗೂ ಹೆಚ್ಚು ಸಮಯದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯುಳಿದಿದೆ. 2020 ಮಾರ್ಚ್‌ನಲ್ಲಿ ಐವರು ನ್ಯಾಯಾಧೀಶರ ಪೀಠವು ಪ್ರಕರಣವನ್ನು ವಿಸ್ತ್ರತ ಪೀಠಕ್ಕೆ ಉಲ್ಲೇಖಿಸಲು ನಿರಾಕರಿಸಿದ ಬಳಿಕ ಅದು ವಿಚಾರಣೆಗೆ ಬಂದಿರಲಿಲ್ಲ.
ಅರ್ಜಿಗಳಲ್ಲಿ ಸಂವಿಧಾನದ 370ನೇ ವಿಧಿಯನ್ನು ದುರ್ಬಲಗೊಳಿಸಿದ ರಾಷ್ಟ್ರಪತಿಗಳ 2019,ಆ.5ರ ಆದೇಶವನ್ನು ಪ್ರಶ್ನಿಸಲಾಗಿದೆ.