ತೆಲಂಗಾಣ | ಸುರಂಗದಡಿ ಸಿಲುಕಿರುವ 8 ಕಾರ್ಮಿಕರ ರಕ್ಷಣೆಗೆ ಮುಂದುವರಿದ ರಕ್ಷಣಾ ಕಾರ್ಯಾಚರಣೆ
Photo credit: PTI
ನಾಗರಕರ್ನೂಲ್ (ತೆಲಂಗಾಣ): ಶನಿವಾರ ಕುಸಿದು ಬಿದ್ದಿದ್ದ ತೆಲಂಗಾಣದಲ್ಲಿನ ನಾಗರಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡ ದಂಡೆ ಕಾಲುವೆ ಸುರಂಗದೊಳಗೆ ಸಿಲುಕಿರುವ ಎಂಟು ಮಂದಿ ಕಾರ್ಮಿಕರನ್ನು ರಕ್ಷಿಸುವ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ನಾಪತ್ತೆಯಾಗಿರುವ ಕಾರ್ಮಿಕರನ್ನು ಪತ್ತೆ ಹಚ್ಚುವ ಹಾಗೂ ರಕ್ಷಿಸುವ ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸೇರಿದಂತೆ ತುರ್ತು ಸೇವೆ ತಂಡಗಳು ತೊಡಗಿವೆ.
ಈ ಕುಸಿತವು ದೋಮಲ್ಪೆಂಟ ಬಳಿ 500 ಅಡಿ ಆಳವಿರುವ ಸುರಂಗದ ಸುಮಾರು 200 ಮೀಟರ್ ಒಳಗೆ ಸಂಭವಿಸಿತ್ತು. ಈ ವೇಳೆ ಸ್ಥಳದಲ್ಲಿ 60 ಕಾರ್ಮಿಕರಿದ್ದರು. ಈ ಪೈಕಿ 52 ಕಾರ್ಮಿಕರು ಸಣ್ಣಪುಟ್ಟ ಗಾಯಗೊಳೊಂದಿಗೆ ಪಾರಾಗುವಲ್ಲಿ ಯಶಸ್ವಿಯಾದರಾದರೂ, ಉಳಿದ ಎಂಟು ಮಂದಿ ಸುರಂಗದೊಳಗೇ ಸಿಲುಕಿಕೊಂಡಿದ್ದಾರೆ.
ಸುರಂಗದೊಳಗೆ ಸಿಲುಕಿಕೊಂಡಿರುವ ಕಾರ್ಮಿಕರನ್ನು ಜೈಪ್ರಕಾಶ್ ಅಸೋಸಿಯೇಟ್ಸ್ ಲಿಮಿಟೆಡ್ ನ ಉತ್ತರ ಪ್ರದೇಶ ನಿವಾಸಿಗಳಾದ ಪ್ರಾಜೆಕ್ಟ್ ಇಂಜಿನಿಯರ್ ಮನೋಜ್ ಕುಮಾರ್ ಹಾಗೂ ಫೀಲ್ಡ್ ಇಂಜಿನಿಯರ್ ಶ್ರೀನಿವಾಸ್, ಜಾರ್ಖಂಡ್ ನ ನಾಲ್ವರು ಕಾರ್ಮಿಕರಾದ ಸಂದೀಪ್ ಸಾಹು, ಜತಕ್ಸ್, ಸಂತೋಷ್ ಸಾಹು ಹಾಗೂ ಅನುಜ್ ಸಾಹು ಮತ್ತು ರಾಬಿನ್ಸ್ ಇಂಡಿಯಾ ಕಂಪನಿಯ ಇಬ್ಬರು ಯಂತ್ರ ನಿರ್ವಾಹಕರಾದ ಜಮ್ಮು ಮತ್ತು ಕಾಶ್ಮೀರದ ಸನ್ನಿ ಸಿಂಗ್ ಹಾಗೂ ಪಂಜಾಬ್ ನ ಗುರ್ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ.