ತೆಲಂಗಾಣ ಸುರಂಗ ಕುಸಿತ | ಎಂಟನೆ ದಿನವೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ: ಟಿಬಿಎಂ ಯಂತ್ರವನ್ನು ತುಂಡರಿಸುತ್ತಿರುವ ರಕ್ಷಣಾ ತಂಡ
Photo : PTI
ನಾಗರಕರ್ನೂಲ್: ಭಾಗಶಃ ಕುಸಿದು ಬಿದ್ದಿದ್ದ ಶ್ರೀ ಶೈಲಂ ಎಡ ದಂಡೆ ಸುರಂಗದೊಳಗೆ ಸಿಲುಕಿಕೊಂಡಿರುವ ಎಂಟು ಮಂದಿ ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಎಂಟನೆ ದಿನವೂ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಟಿಬಿಎಂ ಯಂತ್ರದ ಭಾಗಗಳನ್ನು ತುಂಡರಿಸುವ ಕೆಲಸದಲ್ಲಿ ರಕ್ಷಣಾ ತಂಡಗಳು ತೊಡಗಿವೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ವಾರ ಶ್ರೀಶೈಲಂ ಎಡ ದಂಡೆ ಸುರಂಗದೊಳಗೆ ಸಿಲುಕಿಕೊಂಡಿದ್ದ ಇಂಜಿನಿಯರ್ ಗಳು ಹಾಗೂ ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳಿಗೆ ಇದೀಗ ಪೂರ್ಣಪ್ರಮಾಣದ ವೇಗ ದೊರೆತಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಸರಕಾರಿ ಸ್ವಾಮ್ಯದ ಸಿಂಗರೇಣಿ ಕಲ್ಲಿದ್ದಲು ಗಣಿ ಸಂಸ್ಥೆ, ರ‍್ಯಾಟ್ ಮೈನರ್ ಗಳು, ಹಾಗೂ ಇನ್ನಿತರ ಸಂಸ್ಥೆಗಳ ಸಿಬ್ಬಂದಿಗಳನ್ನೊಳಗೊಂಡ ರಕ್ಷಣಾ ತಂಡವು ನಿರಂತರವಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ನಾಗರಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಗಾಯಕ್ವಾಡ್ ತಿಳಿಸಿದ್ದಾರೆ.
“ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ಶನಿವಾರ ಬೆಳಗ್ಗೆ ತಂಡವೊಂದು ಸುರಂಗದೊಳಗೆ ತೆರಳಿದೆ. ನೀರನ್ನು ಹೊರ ಹಾಕುವ ಕೆಲಸ ಪ್ರಗತಿಯಲ್ಲಿದ್ದು, ಜೊತೆಜೊತೆಗೆ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯವೂ ನಡೆಯುತ್ತಿದೆ” ಎಂದು ಅವರು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಇದರೊಂದಿಗೆ ಮಾರ್ಗವನ್ನು ತೆರವುಗೊಳಿಸಲು ಟಿಬಿಎಂ ಯಂತ್ರದ ಭಾಗಗಳನ್ನೂ ತುಂಡರಿಸಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.
ಈ ನಡುವೆ, ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ನೆಲ ಕೊರೆಯುವ ರಡಾರ್ ಅನ್ನು ಬಳಸಿದ್ದು, ಸುರಂಗದೊಳಗೆ ಕೆಲವು ವೈಪರೀತ್ಯಗಳನ್ನು ಪತ್ತೆ ಹಚ್ಚಿದ್ದಾರೆ.