ಸುಪ್ರೀಂ ತೀರ್ಪಿನ ಹಿನ್ನೆಲೆ : ತಮಿಳುನಾಡು ರಾಜ್ಯಪಾಲರ ರಾಜೀನಾಮೆಗೆ ಮಾರ್ಗರೆಟ್ ಆಳ್ವಾ ಆಗ್ರಹ
ಮಾರ್ಗರೆಟ್ ಆಳ್ವಾ
ಹೊಸದಿಲ್ಲಿ : ರಾಜ್ಯಪಾಲರ ಅಧಿಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ರಾಜ್ಯಪಾಲರ ಅಧಿಕಾರ "ತೀರಾ ಅಗತ್ಯ" ಮತ್ತು "ಸರಿಯಾದ ಕಾಲಕ್ಕೆ ಇದು ಲಭ್ಯವಾಗಬೇಕು" ಎಂದು ಹೇಳಿರುವ ಬೆನ್ನಲ್ಲೇ ರಾಜ್ಯದಲ್ಲೇ ಸ್ವಾಗತಾರ್ಹರಲ್ಲದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ರಾಜೀನಾಮೆ ನೀಡಿ ಮನೆಗೆ ಹೋಗಬೇಕು ಎಂದು ಮಾಜಿ ಕೇಂದ್ರ ಸಚಿವೆ ಹಾಗೂ ನಾಲ್ಕು ರಾಜ್ಯಗಳ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ ಮಾರ್ಗರೆಟ್ ಆಳ್ವಾ ಆಗ್ರಹಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ಎಂ.ಕೆ.ಸ್ಟಾಲಿನ್ ಸರ್ಕಾರ ಆಂಗೀಕರಿಸಿದ 10 ಮಸೂದೆಗಳಿಗೆ ಒಪ್ಪಿಗೆ ನೀಡದೇ ರವಿ ತಡೆಹಿಡಿದಿದ್ದರು. ಸರ್ಕಾರ ಈ ನಿರ್ಧಾರದ ವಿರುದ್ಧ ಸುಪ್ರೀಂಕೋರ್ಟ್‍ನ ಮೊರೆ ಹೋಗಿದ್ದು, ಮಂಗಳವಾರ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ದೇಶದ ಅತ್ಯುನ್ನತ ಕೋರ್ಟ್, ಮಸೂದೆಗಳನ್ನು ತಡೆಹಿಡಿದಿರುವ ರಾಜ್ಯಪಾಲರ ಕ್ರಮ ಅಕ್ರಮ ಮತ್ತು ನಿರಂಕುಶವಾದದ್ದು ಎಂದು ಬಣ್ಣಿಸಿ, ರಾಜ್ಯಪಾಲರು ಒಳ್ಳೆಯ ನಂಬಿಕೆಯಿಂದ ಕಾರ್ಯನಿರ್ವಹಿಸಿಲ್ಲ ಎಂದು ಅಭಿಪ್ರಾಯಪಟ್ಟಿತ್ತು.
ರಾಜ್ಯಪಾಲರ ನಿರ್ಧಾರಗಳನ್ನು ತಳ್ಳಿಹಾಕಿದ ಕೋರ್ಟ್, ಈ ಮಸೂದೆಗಳು ಎರಡನೇ ಬಾರಿಗೆ ರಾಜ್ಯಪಾಲರಿಗೆ ಸಲ್ಲಿಕೆಯಾದ ದಿನದಿಂದಲೇ ಒಪ್ಪಿಗೆ ಪಡೆದಂತೆ ಎಂದು ಪರಿಗಣಿಸುವಂತೆ ಸೂಚಿಸಿತ್ತು.
ಕೋರ್ಟ್ ಸಕಾಲಕ್ಕೆ ಮಧ್ಯಪ್ರವೇಶಿಸಿದ್ದು, ಕೇರಳ, ದೆಹಲಿ ಮತ್ತು ತಮಿಳುನಾಡಿನಂಥ ರಾಜ್ಯಗಳ ಪರಿಸ್ಥಿತಿಯಲ್ಲಿ ಈ ಕ್ರಮ ಅನಿವಾರ್ಯವಾಗಿತ್ತು ಎಂದು ಆಳ್ವಾ ಅಭಿಪ್ರಾಯಪಟ್ಟಿದ್ದಾರೆ. ಕಳೆದ ಹಲವು ವರ್ಷಗಳಿಂದ ರಾಜಭವನಗಳು ತಮ್ಮ ಇಚ್ಛೆಯಂತೆ ಕಾರ್ಯನಿರ್ವಹಿಸುತ್ತಿದ್ದು, ಸಾಂವಿಧಾನಿಕ ಅಂಶಗಳನ್ನು ಪರಿಗಣಿಸುತ್ತಿಲ್ಲ. ರಾಜಭವನಗಳು ಒಂದು ಬಗೆಯ ಸರ್ವಾಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ವಿಶ್ಲೇಷಿಸಿದ್ದಾರೆ.
ರಾಜ್ಯಪಾಲರೊಬ್ಬರು ಮೂರು ವರ್ಷಗಳಲ್ಲಿ 10 ಮಸೂದೆಗಳನ್ನು ತಡೆಹಿಡಿಯಲಾಗದು. ಇದು ಕಂಡು ಕೇಳರಿಯದ ಕ್ರಮ. ಸರ್ಕಾರದ ಅಧಿಕಾರಾವಧಿ ಐದು ವರ್ಷಗಳಾಗಿದ್ದು, ಮಸೂದೆಗೆ ಆಂಗೀಕಾರವನ್ನು ನಾಲ್ಕು ವರ್ಷಗಳ ಕಾಳ ತಡೆಹಿಡಿಯಲಾಗಿದೆ ಎಂದು ಲೇವಡಿ ಮಾಡಿದ್ದಾರೆ.