ರೂ. 2,000 ಮುಖಬೆಲೆಯ 97.4% ನೋಟುಗಳು ವಾಪಸ್
Photo: PTI
ಮುಂಬೈ: 2023ರ ಮೇ ವೇಳೆಗೆ ಚಲಾವಣೆಯಲ್ಲಿದ್ದ 2,000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳ ಪೈಕಿ 97.4%ದಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಸೋಮವಾರ ತಿಳಿಸಿದೆ. ಅದೇ ವೇಳೆ, ಇನ್ನುಳಿದಿರುವ 2,000 ರೂ. ನೋಟುಗಳು ಕಾನೂನು ಬದ್ಧ ಕರೆನ್ಸಿ ನೋಟುಗಳಾಗಿ ಮುಂದುವರಿಯಲಿವೆ ಎಂದು ಅದು ಸ್ಪಷ್ಟಪಡಿಸಿದೆ.
ರೂ. 2,000 ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಕಳೆದ ವರ್ಷದ ಮೇ 19ರಂದು ಆರ್ ಬಿ ಐ ಘೋಷಿಸಿತ್ತು. ಅದು ಬ್ಯಾಂಕ್ ಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡಲು ಸೆಪ್ಟಂಬರ್ 30ರ ಗಡುವು ನೀಡಿತ್ತು. ಬಳಿಕ ಗಡುವನ್ನು ಅಕ್ಟೋಬರ್ 7ರವರೆಗೆ ವಿಸ್ತರಿಸಲಾಗಿತ್ತು.
9,760 ಕೋಟಿ ರೂಪಾಯಿ ಮೌಲ್ಯದ 2,000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ಗಳಲ್ಲಿ ಠೇವಣಿ ಮಾಡಲಾಗಿಲ್ಲ ಅಥವಾ ವಿನಿಮಯಗೊಳಿಸಲಾಗಿಲ್ಲ ಎಂದು ಡಿಸೆಂಬರ್ 1ರಂದು ಆರ್ ಬಿ ಐ ಘೋಷಿಸಿತ್ತು. ಕಳೆದ ವರ್ಷದ ಡಿಸೆಂಬರ್ 29ರ ವೇಳೆಗೆ, ಬ್ಯಾಂಕ್ ಗಳಿಗೆ ಜಮೆ ಆಗದ ರೂ. 2,000 ಮುಖಬೆಲೆಯ ನೋಟುಗಳ ಮೌಲ್ಯ 9,330 ಕೋಟಿ ರೂಪಾಯಿ ಆಗಿತ್ತು.
2023 ಮೇ 19ರಂದು ದೇಶದಲ್ಲಿ ಚಲಾವಣೆಯಲ್ಲಿದ್ದ ರೂ. 2,000 ಮುಖಬೆಲೆಯ ಕರೆನ್ಸಿ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿ ಆಗಿತ್ತು.
ಕೇಂದ್ರ ಸರಕಾರವು, 2016 ನವೆಂಬರ್ 8ರಂದು ತೆಗೆದುಕೊಂಡ ದಿಢೀರ್ ಕ್ರಮವೊಂದರಲ್ಲಿ, ಚಾಲ್ತಿಯಲ್ಲಿದ್ದ 500 ಮತ್ತು 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಬಳಿಕ ಅವುಗಳ ಸ್ಥಾನದಲ್ಲಿ ರೂ. 500 ಮತ್ತು ರೂ. 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು.
ಭ್ರಷ್ಟಾಚಾರದ ವಿರುದ್ಧದ ಹೋರಾಟದ ಭಾಗವಾಗಿ ಆ ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆದುಕೊಳ್ಳುತ್ತಿರುವುದಾಗಿ ಕೇಂದ್ರ ಸರಕಾರ ಅಂದು ಹೇಳಿತ್ತು. ತಮ್ಮ ಹಣವನ್ನು ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಸರತಿ ಸಾಲುಗಳಲ್ಲಿ ನಿಂತಿದ್ದ ಹಲವು ಹಿರಿಯ ವ್ಯಕ್ತಿಗಳು ಪ್ರಾಣ ಕಳೆದುಕೊಂಡಿದ್ದರು.
ಈಗಲೂ ವಿನಿಮಯ ಚಾಲ್ತಿಯಲ್ಲಿ
ಅಕ್ಟೋಬರ್ 7ರ ಬಳಿಕ, ಬ್ಯಾಂಕ್ ಗಳು 2,000 ರೂಪಾಯಿ ಮುಖಬೆಲೆಯ ನೋಟುಗಳ ವಿನಿಮಯವನ್ನು ಸ್ಥಗಿತಗೊಳಿಸಿದ್ದವು. ಆದರೆ, ದೇಶಾದ್ಯಂತವಿರುವ ಭಾರತೀಯ ರಿಸರ್ವ್ ಬ್ಯಾಂಕಿನ 19 ಶಾಖೆಗಳಲ್ಲಿ ವಿನಿಮಯ ಸೌಲಭ್ಯ ಚಾಲ್ತಿಯಲ್ಲಿದೆ. ಅಹ್ಮದಾಬಾದ್, ಬೆಂಗಳೂರು, ಭೋಪಾಲ್, ಭುವನೇಶ್ವರ, ಮುಂಬೈ ಮತ್ತು ಹೊಸದಿಲ್ಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಈ ಸೌಲಭ್ಯ ಲಭ್ಯವಿದೆ.
ಭಾರತದಲ್ಲಿ ವಾಸಿಸುತ್ತಿರುವ ಮತ್ತು ದೇಶದಲ್ಲೇ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಭಾರತೀಯರು, ದೇಶದ ಯಾವುದೇ ಅಂಚೆ ಕಚೇರಿಯ ಮೂಲಕ ರೂ. 2,000 ಮುಖಬೆಲೆಯ ನೋಟುಗಳನ್ನು ಈ ಆರ್ ಬಿ ಐ ಶಾಖೆಗಳಿಗೆ ಈಗಲೂ ವಿನಿಮಯಕ್ಕಾಗಿ ಕಳುಹಿಸಬಹುದಾಗಿದೆ. ಹಣವು ಬಳಿಕ ಅವರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತದೆ.