×
Ad

ಪಂಜಾಬ್ ನಿಂದ ಡಂಕಿ ಮಾರ್ಗವಾಗಿ ಅಮೆರಿಕ ತಲುಪಲು ಏಜೆಂಟ್ ಗಳಿಗೆ 44.70 ಕೋಟಿ ರೂ. ಪಾವತಿ: ವರದಿ

Update: 2025-02-27 14:40 IST

Photo : PTI

ಹೊಸದಿಲ್ಲಿ: ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದ ಭಾರತೀಯರು, ಈ ಪ್ರಕ್ರಿಯೆಯಲ್ಲಿ ಪಂಜಾಬ್ ನಿಂದ ಕನಿಷ್ಠ 32 ದೇಶಗಳ ಮೂಲಕ ಡಂಕಿ ಮಾರ್ಗವಾಗಿ ಅಮೆರಿಕ ಪ್ರವೇಶಿಸಲು ಪ್ರವಾಸಿ ಏಜೆಂಟ್ ಗಳಿಗೆ ಒಟ್ಟು 44.70 ಕೋಟಿ ರೂ. ಪಾವತಿಸಿದ್ದರು ಎಂಬ ಸಂಗತಿ ಪಂಜಾಬ್ ಸರಕಾರದ ದತ್ತಾಂಶಗಳಿಂದ ಬೆಳಕಿಗೆ ಬಂದಿದೆ.

The Indian Express ವರದಿಯ ಪ್ರಕಾರ, ಭಾರತೀಯರು ಅಮೆರಿಕಕ್ಕೆ ತಲುಪಲು ನೆರವು ನೀಡಲು ಪ್ರವಾಸಿ ಏಜೆಂಟ್ ಗಳು ಚೀನಾ, ಗಿನಿಯ, ಕೀನ್ಯಾ, ಈಜಿಪ್ಟ್, ಝೆಕ್ ಗಣರಾಜ್ಯ ಹಾಗೂ ಬೆಲಾರಸ್ ನಂತಹ ವೈವಿಧ್ಯಮಯ ಮಾರ್ಗಗಳನ್ನು ಬಳಸಿರುವುದು 19 ಎಫ್ಐಆರ್ ಗಳನ್ನು ವಿಶ್ಲೇಷಿಸಿದ ನಂತರ ಸ್ಪಷ್ಟವಾಗಿದೆ ಎಂದು ಹೇಳಲಾಗಿದೆ.

ಈ ಎಫ್ಐಆರ್ ಗಳಲ್ಲಿ ಪ್ರಕರಣ ದಾಖಲಾಗಿರುವ 36 ಏಜೆಂಟ್ ಗಳ ಪೈಕಿ ಐದು ಮಂದಿ ವಿದೇಶಗಳಲ್ಲಿ ನೆಲೆಸಿದ್ದು, ಉಳಿದವರೆಲ್ಲ ಪಂಜಾಬ್ ಮತ್ತು ಹರ್ಯಾಣದ ನಿವಾಸಿಗಳಾಗಿದ್ದಾರೆ. ಈ ಎಫ್ಐಆರ್ ಗಳಲ್ಲಿ ವಲಸೆ ವ್ಯವಹಾರವನ್ನೂ ನಡೆಸುತ್ತಿರುವ ರೈತ ಸಂಘಟನೆಯ ನಾಯಕ ಮೋಗಾರ ಹೆಸರು ದಾಖಲಾಗಿದೆ ಎಂದು ವರದಿಯಾಗಿದೆ.

ವಿಶ್ಲೇಷಣೆಯ ಪ್ರಕಾರ, ಬಹುತೇಕ ಸಣ್ಣ ಗ್ರಾಮಗಳು ಹಾಗೂ ಸಣ್ಣ ಪಟ್ಟಣಗಳ ವಲಸಿಗರೇ ಈ ಏಜೆಂಟರನ್ನು ಸಂಪರ್ಕಿಸಿದ್ದಾರೆ. ಭಾರತದಿಂದ ಅಮೆರಿಕವನ್ನು ಪ್ರವೇಶಿಸುವ ಡಂಕಿ ಪ್ರಕ್ರಿಯೆಯ ಅವಧಿ ಸುಮಾರು ಮೂರು ತಿಂಗಳಿನಿಂದ ಒಂದು ವರ್ಷದವರೆಗೆ ತಗುಲಿದೆ ಎನ್ನಲಾಗಿದೆ.

ಏಜೆಂಟ್ ಗಳ ಕಾರ್ಯವಿಧಾನವನ್ನೂ The Indian Express ಸುದ್ದಿ ಸಂಸ್ಥೆ ಬಯಲು ಮಾಡಿದ್ದು, ಭಾರತೀಯರು ಅಮೆರಿಕಕ್ಕೆ ತಮ್ಮ ಅಕ್ರಮ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಏಜೆಂಟ್ ಗಳು ತವರಿನಲ್ಲಿರುವ ಅವರ ಕುಟುಂಬದ ಸದಸ್ಯರಿಂದ ಕಂತಿನಲ್ಲಿ ಹಣ ಸಂಗ್ರಹಿಸುತ್ತಿದ್ದರು. ಕೆಲವು ಪ್ರಕರಣಗಳಲ್ಲಿ ಈ ಹಿಂದೆ ಒಪ್ಪಿಕೊಂಡಿದ್ದ ಮೊತ್ತಕ್ಕಿಂತ ಹೆಚ್ಚು ಹಣಕ್ಕಾಗಿ ಅವರ ಕುಟುಂಬದ ಸದಸ್ಯರ ಬಳಿ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಪರಿಷ್ಕೃತ ಮೊತ್ತವನ್ನು ಪಾವತಿಸದಿದ್ದರೆ, ನಿಮ್ಮ ಮಕ್ಕಳ ಪ್ರಯಾಣ ಮುಂದುವರಿಯುವುದಿಲ್ಲ ಎಂದು ಅವರಿಗೆ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಹೇಳಿದೆ.

ಈ ವಿಶ್ಲೇಷಣೆಯ ಪ್ರಕಾರ, ಅಮೆರಿಕಕ್ಕೆ ವಲಸೆ ಹೋಗಲು ದೇಶದಿಂದ ದೇಶಕ್ಕೆ ಹಾರಿರುವ ಈ ಅಕ್ರಮ ವಲಸಿಗರು ಸರಾಸರಿ 40-45 ಲಕ್ಷ ರೂ. ವೆಚ್ಚ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಪೈಕಿ ಹಲವರು ಭಾರತದಲ್ಲಿನ ಪ್ರಕರಣಗಳಲ್ಲಿ ಶಂಕಿತ ಆರೋಪಿಗಳಾಗಿರುವವರು, ರೈತರು, ಟ್ರಕ್ ಚಾಲಕರು ಸೇರಿದ್ದಾರೆ. ಇವರೆಲ್ಲ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ತಮ್ಮ ಪೂರ್ವಜರ ಜಮೀನುಗಳು, ಮನೆಗಳು ಹಾಗೂ ಒಡವೆಗಳನ್ನು ಮಾರಾಟ ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ, ಈ ಕುರಿತು ತನಿಖೆ ನಡೆಸಲು ನಾಲ್ಕು ಸದಸ್ಯರ ವಿಶೇಷ ತನಿಖಾ ತಂಡ ರಚಿಸಿರುವ ಪಂಜಾಬ್ ಪೊಲೀಸರು, ರಾಷ್ಟ್ರೀಯ ತನಿಖಾ ದಳ(NIA)ವನ್ನು ಸಂಪರ್ಕಿಸುವ ಕುರಿತೂ ಪರಿಗಣಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News