ಜಾತಿ ಗಣತಿ ನಡೆಸಬಾರದು ಎಂದ ಆರೆಸ್ಸೆಸ್
ನಾಗಪುರ: ಸಾಮಾಜಿಕ ಹಾಗೂ ರಾಷ್ಟ್ರೀಯ ಏಕತೆಗೆ ಸೂಕ್ತವಲ್ಲದೇ ಇರುವುದರಿಂದ ಜಾತಿ ಗಣತಿ ನಡೆಸಬಾರದು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಮಂಗಳವಾರ ಹೇಳಿದೆ.
ಜಾತಿ ಗಣತಿಯ ಅಗತ್ಯವನ್ನು ಪ್ರಶ್ನಿಸಿದ ಆರೆಸ್ಸೆಸ್ ಪದಾಧಿಕಾರಿ ಶ್ರೀಧರ್ ಗಾಡ್ಗೆ, ಜಾತಿ ಗಣತಿ ಕೆಲವರಿಗೆ ರಾಜಕೀಯವಾಗಿ ಲಾಭವಾಗಬಹುದು. ಏಕೆಂದರೆ, ಇದು ನಿರ್ದಿಷ್ಟ ಜಾತಿಯ ಜನಸಂಖ್ಯೆ ಎಷ್ಟು ಎಂಬ ದತ್ತಾಂಶವನ್ನು ನೀಡುತ್ತದೆ. ಆದರೆ, ಇದು ರಾಷ್ಟ್ರೀಯ ಏಕತೆಗೆ ಉತ್ತಮವಲ್ಲ ಎಂದಿದ್ದಾರೆ.
ಜಾತಿ ಆಧಾರಿತ ಗಣತಿ ನಡೆಸಬಾರದು ಎಂಬುದು ನಮ್ಮ ಭಾವನೆ. ಯಾಕೆಂದರೆ, ಅದನ್ನು ನಡೆಸಲು ನಮಗೆ ಯಾವುದೇ ಕಾರಣ ಇಲ್ಲ. ಜಾತಿ ಗಣತಿ ಮಾಡುವ ಮೂಲಕ ನಾವು ಏನನ್ನು ಸಾಧಿಸಲಿದ್ದೇವೆ? ಇದು ತಪ್ಪು ಎಂದು ವಿದರ್ಭದ ಸಹ ಸಂಘಚಾಲಕ್ ಗಾಡ್ಗೆ ಅವರು ಹೇಳಿದ್ದಾರೆ.
‘‘ಯಾವುದೇ ಅಸಮಾನತೆ, ದ್ವೇಷ ಹಾಗೂ ಜಗಳ ಇರಬಾರದು ಎಂಬ ಸ್ಪಷ್ಟ ನಿಲುವನ್ನು ನಾವು ಹೊಂದಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ. ಜಾತಿ ಗಣತಿಗೂ ಮೀಸಲಾತಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಗಾಡ್ಗೆ ಹೇಳಿದ್ದಾರೆ. ಮೀಸಲಾತಿ ಬೇರೆ ವಿಚಾರ. ಜಾತಿ ವ್ಯವಸ್ಥೆಯನ್ನು ನೀವು ನಿರ್ಮೂಲನೆ ಮಾಡಬಹುದು. ನಾನು ಯಾವ ಜಾತಿಯಲ್ಲಿ ಹುಟ್ಟಿದ್ದೇನೋ ಆ ಜಾತಿಗೆ ಸೇರಿದವನಾಗಿರುತ್ತೇನೆ. ಮೀಸಲಾತಿ ಅಡಿಯಲ್ಲಿ ಬಂದಾಗ ಜಾತಿಯನ್ನು ಉಲ್ಲೇಖಿಸಲಾಗುತ್ತದೆ ಎಂದು ಗಾಡ್ಗೆ ತಿಳಿಸಿದ್ದಾರೆ.
ಮೀಸಲಾತಿ ಹಾಗೂ ಜಾತಿ ಗಣತಿ ಪ್ರತ್ಯೇಕ ವಿಷಯ ಎಂದು ಹೇಳಿದ ಗಾಡ್ಗೆ, ಸಾಮಾಜಿಕ ಸುಧಾರಣೆಗೆ ಮೀಸಲಾತಿ ಜಾರಿಗೆ ತರಲಾಗಿದೆ. ಆದುದರಿಂದ ಸಂಪೂರ್ಣ ಸಾಮಾಜಿಕ ಪ್ರಗತಿಯಾಗುವ ವರೆಗೆ ಇದು ಮುಂದುವರಿಯುತ್ತದೆ. ಯಾಕೆಂದರೆ, ಎಲ್ಲಾ ಸಮುದಾಯಗಳು ಇದುವರೆಗೆ ಪ್ರಗತಿ ಸಾಧಿಸಿಲ್ಲ ಎಂದರು.