×
Ad

ಪಾಕಿಸ್ತಾನದ ಮಿಲಿಟರಿ ದಾಳಿ ನಡೆಸಿದರೆ ಕಠಿಣ ಉತ್ತರ ಖಚಿತ: ಎಸ್.ಜೈಶಂಕರ್

Update: 2025-05-08 19:12 IST

ಎಸ್.ಜೈಶಂಕರ್ | PC : PTI 

ಹೊಸದಿಲ್ಲಿ ‘ಆಪರೇಷನ್ ಸಿಂಧೂರ’ಕ್ಕೆ ಪ್ರತೀಕಾರವಾಗಿ ಯಾವುದೇ ಮಿಲಿಟರಿ ಕ್ರಮಕ್ಕೆ ಪಾಕಿಸ್ತಾನವು ಮುಂದಾದರೆ ಭಾರತವು ಅತ್ಯಂತ ಕಠಿಣವಾಗಿ ಪ್ರತಿಕ್ರಿಯಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಗುರುವಾರ ಇಲ್ಲಿ ಘೋಷಿಸಿದರು.

ಇಸ್ಲಾಮಾಬಾದ್‌ ನಿಂದ ಹೊಸದಿಲ್ಲಿಗೆ ಆಗಮಿಸಿದ ಇರಾನಿನ ವಿದೇಶಾಂಗ ವ್ಯವಹಾರಗಳ ಸಚಿವ ಅಬ್ಬಾಸ್ ಅರಘ್ಚಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳ ಸಂದರ್ಭದಲ್ಲಿ ಜೈಶಂಕರ್ ಭಾರತದ ನಿಲುವನ್ನು ಪ್ರಕಟಿಸಿದರು.

‘ಎ.22ರಂದು ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮುಕಾಶ್ಮೀರದಲ್ಲಿ ನಡೆದ ಬರ್ಬರ ದಾಳಿಗೆ ನಾವು ಉತ್ತರಿಸುತ್ತಿರುವ ಸಂದರ್ಭದಲ್ಲಿ ನೀವು ಇಲ್ಲಿಗೆ ಭೇಟಿ ನೀಡಿದ್ದೀರಿ. ಈ ದಾಳಿಯು ಮೇ 7ರಂದು ಗಡಿಯಾಚೆಯ ಭಯೋತ್ಪಾದಕ ನೆಲೆಗಳ ಮೇಲೆ ದಾಳಿಗಳನ್ನು ನಡೆಸುವ ಮೂಲಕ ನಾವು ಪ್ರತಿಕ್ರಿಯಿಸುವುದನ್ನು ಅನಿವಾರ್ಯವಾಗಿಸಿತ್ತು’ ಎಂದು ಜೈಶಂಕರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿಯ ಒಂಭತ್ತು ಭಯೋತ್ಪಾದಕ ಶಿಬಿರಗಳ ವಿರುದ್ಧ ‘ಆಪರೇಷನ್ ಸಿಂಧೂರ’ವನ್ನು ಉಲ್ಲೇಖಿಸಿ ಹೇಳಿದರು.

‘ನಮ್ಮ ಪ್ರತಿಕ್ರಿಯೆಯು ನಿಖರ ಮತ್ತು ಸ್ಪಷ್ಟವಾಗಿತ್ತು. ಪರಿಸ್ಥಿತಿಯನ್ನು ಉಲ್ಬಣಗೊಳಿಸುವುದು ನಮ್ಮ ಉದ್ದೇಶವಲ್ಲ. ಆದಾಗ್ಯೂ ನಮ್ಮ ಮೇಲೆ ಮಿಲಿಟರಿ ದಾಳಿಗಳು ನಡೆದರೆ ಅದಕ್ಕೆ ಅತ್ಯಂತ ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ,ಈ ಬಗ್ಗೆ ಯಾವುದೇ ಶಂಕೆ ಬೇಡ. ನಮ್ಮ ನೆರೆಯ ಮತ್ತು ನಿಕಟ ಪಾಲುದಾರ ದೇಶವಾಗಿ ನೀವು ಪರಿಸ್ಥಿತಿಯ ಬಗ್ಗೆ ಉತ್ತಮ ತಿಳುವಳಿಕೆಯನ್ನು ಹೊಂದಿರುವುದು ಮುಖ್ಯ’ ಎಂದೂ ಜೈಶಂಕರ್ ಹೇಳಿದರು.

ಇದಕ್ಕೂ ಮುನ್ನ ಭಾರತಕ್ಕೆ ದಿಢೀರ್ ಭೇಟಿ ನೀಡಿದ್ದ ಸೌದಿ ಅರೇಬಿಯಾದ ಸಹಾಯಕ ವಿದೇಶಾಂಗ ಸಚಿವ ಆಡೆಲ್ ಅಲ್‌ಜುಬೈರ್ ಅವರೊಂದಿಗೆ ಮಾತುಕತೆ ನಡೆಸಿದ ಜೈಶಂಕರ ಭಯೋತ್ಪಾದನೆಯನ್ನು ದೃಢವಾಗಿ ಎದುರಿಸುವ ಬಗ್ಗೆ ಭಾರತದ ದೃಷ್ಟಿಕೋನಗಳನ್ನು ಹಂಚಿಕೊಂಡಿದ್ದರು.

ಬುಧವಾರ ಜೈಶಂಕರ ಅವರು ಸ್ಪೇನ್,ಫ್ರಾನ್ಸ್,ಜರ್ಮನಿ, ಜಪಾನ್ ಮತ್ತು ಖತರ್‌ ಗಳ ವಿದೇಶಾಂಗ ಸಚಿವರ ಜೊತೆ ಚರ್ಚೆಗಳನ್ನು ನಡೆಸಿದ್ದರು.ಗಡಿಯಾಚೆಯ ಭಯೋತ್ಪಾದನೆಯನ್ನು ಎದುರಿಸುವ ಭಾರತದ ದೃಢಸಂಕಲ್ಪವನ್ನು ಒತ್ತಿ ಹೇಳಿದ್ದ ಅವರು, ಆ ದೇಶಗಳು ವ್ಯಕ್ತಪಡಿಸಿದ ಏಕತೆ ಮತ್ತು ಬೆಂಬಲಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News