×
Ad

ಶಬರಿಮಲೆ ಚಿನ್ನ ವಂಚನೆ: ಎಸ್‌ಐಟಿ ತನಿಖೆಗೆ ಕೇರಳ ಹೈಕೋರ್ಟ್ ಆದೇಶ

Update: 2025-10-06 15:57 IST

ಶಬರಿಮಲೆ | Photo credit : PTI 

ಕೊಚ್ಚಿ: ಶಬರಿಮಲೆ ದೇವಸ್ಥಾನದಲ್ಲಿ ದ್ವಾರಪಾಲಕರ ವಿಗ್ರಹಗಳಿಗೆ ಅಳವಡಿಸಲಾಗಿದ್ದ ಚಿನ್ನ ಲೇಪಿತ ತಾಮ್ರದ ಹೊದಿಕೆಗಳಿಂದ ಚಿನ್ನ ಕಳೆದುಹೋಗಿರುವ ಆರೋಪದ ಕುರಿತು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡದಿಂದ(ಸಿಟ್) ತನಿಖೆಯನ್ನು ನಡೆಸುವಂತೆ ಕೇರಳ ಉಚ್ಚ ನ್ಯಾಯಾಲಯವು ಸೋಮವಾರ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ರಾಜಾ ವಿಜಯರಾಘವನ್ ಮತ್ತು ಕೆ.ವಿ.ಜಯಕುಮಾರ ಅವರ ವಿಭಾಗೀಯ ಪೀಠವು ಹೆಚ್ಚುವರಿ ಪೋಲಿಸ್ ಮಹಾನಿರ್ದೇಶಕ(ಎಡಿಜಿಪಿ) ಎಚ್.ವೆಂಕಟೇಶ ಅವರನ್ನು ಸಿಟ್ ಮುಖ್ಯಸ್ಥರನ್ನಾಗಿ ನೇಮಕಗೊಳಿಸಿತು.

ಚಿನ್ನ ಲೇಪಿತ ಹೊದಿಕೆಯ ದುರಸ್ತಿ ಕೆಲಸವನ್ನು ವಹಿಸಿಕೊಂಡಿದ್ದ ಉನ್ನಿಕೃಷ್ಣನ್ ಪೊಟ್ಟಿ ಎಂಬ ಭಕ್ತ ದುರಸ್ತಿಯ ಬಳಿಕ ಉಳಿದಿರುವ ಚಿನ್ನವನ್ನು ಯುವತಿಯೋರ್ವಳ ಮದುವೆಗೆ ತಾನು ಬಳಸಬಹುದೇ ಎಂದು ಕೋರಿ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧ್ಯಕ್ಷರಿಗೆ ಇಮೇಲ್ ಕಳುಹಿಸಿದ್ದ ಎನ್ನುವುದು ಬಹಿರಂಗಗೊಂಡ ನಂತರ ನ್ಯಾಯಾಲಯವು ಸಿಟ್ ತನಿಖೆಗೆ ಆದೇಶಿಸಿದೆ.

ನ್ಯಾಯಾಲಯ ಅಥವಾ ಶಬರಿಮಲೆ ವಿಶೇಷ ಆಯುಕ್ತರ ಪೂರ್ವಾನುಮತಿಯಿಲ್ಲದೆ ದುರಸ್ತಿ ಕೆಲಸಕ್ಕಾಗಿ ಕಳುಹಿಸಲಾಗಿದ್ದ ದ್ವಾರಪಾಲಕರ ವಿಗ್ರಹಗಳ ಚಿನ್ನ ಲೇಪಿತ ತಾಮ್ರದ ಹೊದಿಕೆಗಳಿಂದ ಭಾಗಶಃ ಚಿನ್ನ ನಷ್ಟವಾಗಿದೆ ಎಂಬ ವರದಿಗಳಿಂದಾಗಿ ಕಳವಳಗೊಂಡಿದ್ದ ನ್ಯಾಯಾಲಯವು ಈ ಬಗ್ಗೆ ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದೆ.

ಟಿಡಿಬಿಯು ಚಿನ್ನ ಲೇಪಿತ ತಾಮ್ರದ ಹೊದಿಕೆಗಳನ್ನು ಪೊಟ್ಟಿಯ ಪ್ರಾಯೋಜಕತ್ವದಡಿ ಚೆನ್ನೈನ ‘ಸ್ಮಾರ್ಟ್ ಕ್ರಿಯೇಷನ್ಸ್’ ಸಂಸ್ಥೆಗೆ ಒಪ್ಪಿಸಿತ್ತು.

ಸ್ಮಾರ್ಟ್ ಕ್ರಿಯೇಷನ್ಸ್‌ಗೆ ಒಪ್ಪಿಸಲು 42.8 ಕೆ.ಜಿ.ತೂಕದ ಹೊದಿಕೆಗಳನ್ನು ಪೊಟ್ಟಿಗೆ ಹಸ್ತಾಂತರಿಸಲಾಗಿತ್ತು,ಆದರೆ ಸಂಸ್ಥೆಯು ಕೇವಲ ಸುಮಾರು 38 ಕೆ.ಜಿ.ತೂಕದ ಹೊದಿಕೆಗಳನ್ನು ಮಾತ್ರ ಸ್ವೀಕರಿಸಿತ್ತು ಎಂಬ ವರದಿಗಳಿಂದಾಗಿ ನ್ಯಾಯಾಲಯವು ಕಳವಳಗೊಂಡಿತ್ತು. ಸುಮಾರು 4.54 ಕೆ.ಜಿ. ವ್ಯತ್ಯಾಸ ಕಂಡು ಬಂದಿದ್ದು, ಇದನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿದೆ.

ನ್ಯಾಯಾಲಯವು ಸೆ.17ರಂದು ಈ ವಿಷಯದಲ್ಲಿ ತನಿಖೆಗೆ ಆದೇಶಿಸಿತ್ತು. ಪೊಟ್ಟಿಯ ಸೋದರಿ ಮಿನಿ ನಿವಾಸದಲ್ಲಿ ನಡೆಸಿದ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ ಕೆಲವು ಚಿನ್ನಲೇಪಿತ ಭಾಗಗಳು ಪತ್ತೆಯಾಗಿವೆ ಎಂದು ಮುಖ್ಯ ಜಾಗ್ರತ ಅಧಿಕಾರಿಗಳ ವರದಿಯು ಬಹಿರಂಗಗೊಳಿಸಿತ್ತು.

ಟಿಡಿಬಿ ರಿಜಿಸ್ಟರ್‌ಗಳಲ್ಲಿ ಗಂಭೀರ ವ್ಯತ್ಯಾಸಗಳನ್ನು ವರದಿಯು ಎತ್ತಿ ತೋರಿಸಿತ್ತು. ಟಿಡಿಬಿ ರಿಜಿಸ್ಟರ್‌ಗಳಲ್ಲಿ ನಿಖರತೆಯ ಕೊರತೆಯಿದೆ ಎನ್ನುವುದನ್ನು ಗಮನಿಸಿದ ನ್ಯಾಯಾಲಯವು ಶಬರಿಮಲೆ ದೇವಸ್ಥಾನದಲ್ಲಿನ ಎಲ್ಲ ಬೆಲೆಬಾಳುವ ಸೊತ್ತುಗಳ ದಾಸ್ತಾನು ಪರಿಶೀಲನೆಯ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುವಂತೆ ಮಾಜಿ ಹೈಕೋರ್ಟ್ ನ್ಯಾಯಾಧೀಶ ಕೆ.ಟಿ.ಶಂಕರನ್ ಅವರಿಗೆ ಕಳೆದ ವಾರ ಸೂಚಿಸಿತ್ತು.

ಸೋಮವಾರ ಸಿಟ್ ತನಿಖೆಗೆ ಆದೇಶಿಸಿದ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯವು ಪ್ರಕರಣದಲ್ಲಿ ವಿವಿಧ ಶಿಕ್ಷಾರ್ಹ ಅಪರಾಧಗಳು ನಡೆದಿರುವಂತೆ ಕಂಡು ಬರುತ್ತಿದೆ ಎಂದು ಹೇಳಿತು. ಆರೋಪಿಸಲಾಗಿರುವ ಪಿತೂರಿಯು ಪೊಟ್ಟಿಗಷ್ಟೇ ಸೀಮಿತವಾಗಿಲ್ಲ, ನಿಯಮಗಳನ್ನು ಉಲ್ಲಂಘಿಸಿ ಚಿನ್ನವನ್ನು ಹಸ್ತಾಂತರಿಸಿದ ಅಧಿಕಾರಿಗಳೂ ಭಾಗಿಯಾಗಿದ್ದಾರೆ ಎನ್ನುವುದನ್ನೂ ಅದು ಗಮನಕ್ಕೆ ತೆಗೆದುಕೊಂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News