×
Ad

ಪಶ್ಚಿಮ ಬಂಗಾಳದಲ್ಲಿ ಸಾಧುಗಳಿಗೆ ಥಳಿತ;12 ಮಂದಿ ಆರೋಪಿಗಳ ಬಂಧನ

Update: 2024-01-13 19:13 IST

Photo: NDTV 

ಕೋಲ್ಕತಾ: ಗುಂಪೊಂದು ಮೂವರು ಸಾಧುಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆದಿದ್ದು, ಇದು ಬಿಜೆಪಿ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ಇನ್ನೊಂದು ಸಂಘರ್ಷಕ್ಕೆ ಕಾರಣವಾಗಿದೆ.

ಘಟನೆಯ ವೀಡಿಯೊಗಳು ವೈರಲ್ ಆದ ಬಳಿಕ ದಾಳಿಗೆ ಸಂಬಂಧಿಸಿದಂತೆ 12 ಜನರನ್ನು ಪೋಲಿಸರು ಬಂಧಿಸಿದ್ದಾರೆ.

ಮಕರ ಸಂಕ್ರಾಂತಿ ಉತ್ಸವದಲ್ಲಿ ಪಾಲ್ಗೊಳ್ಳಲು ಪ.ಬಂಗಾಳದ ಪವಿತ್ರ ಯಾತ್ರಾಸ್ಥಳ ಗಂಗಾಸಾಗರಕ್ಕೆ ಪ್ರಯಾಣಿಸುತ್ತಿದ್ದ ಮೂವರು ಸಾಧುಗಳು ದಾರಿಯಲ್ಲಿ ಸಿಕ್ಕ ಮಹಿಳೆಯರ ಗುಂಪಿನ ಬಳಿ ದಾರಿಯನ್ನು ಕೇಳಿದ್ದರು. ಮೈತುಂಬ ಭಸ್ಮವನ್ನು ಲೇಪಿಸಿಕೊಂಡಿದ್ದ ಸಾಧುಗಳನ್ನು ಕಂಡು ಗಾಬರಿಗೊಂಡಿದ್ದ ಮಹಿಳೆಯರು ಕೂಗಿಕೊಂಡಿದ್ದರು. ಸ್ಥಳಕ್ಕೆ ಧಾವಿಸಿದ ಗುಂಪೊಂದು ಸಾಧುಗಳ ಮೇಲೆ ದಾಳಿ ನಡೆಸಿತ್ತು.

ಘಟನೆಯ ಹಿಂದೆ ಯಾವುದೇ ಕೋಮುಸಂಬಂಧಿತ ಕಾರಣ ಈವರೆಗೆ ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಾಧುಗಳನ್ನು ಗುಂಪಿನಿಂದ ರಕ್ಷಿಸಿ ಅವರ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಟಿಎಂಸಿ ವಿರುದ್ಧ ದಾಳಿ ನಡೆಸಿರುವ ಬಿಜೆಪಿ,ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂದು ಆರೋಪಿಸಿದೆ. ಹಲವಾರು ಬಿಜೆಪಿ ನಾಯಕರು ಎಕ್ಸ್ ನಲ್ಲಿ ಸಾಧುಗಳ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ.

ಪುರುಲಿಯಾ ಘಟನೆಯು ಆಕ್ರೋಶವನ್ನುಂಟು ಮಾಡಿದೆ. ಗಂಗಾಸಾಗರಕ್ಕೆ ತೆರಳುತ್ತಿದ್ದ ಸಾಧುಗಳ ಮೇಲೆ ಕ್ರೂರವಾಗಿ ದಾಳಿ ನಡೆಸಿರುವುದು ಟಿಎಂಸಿ ಆಡಳಿತದಲ್ಲಿ ಸುರಕ್ಷತೆ ಹದಗೆಟ್ಟಿದೆ ಎನ್ನುವುದಕ್ಕೆ ಪುರಾವೆಯಾಗಿದೆ ಎಂದು ಹೂಗ್ಲಿ ಬಿಜೆಪಿ ಸಂಸದೆ ಲಾಕೆಟ್ ಚಟರ್ಜಿ ಹೇಳಿದ್ದಾರೆ.

ಪದೇ ಪದೇ ಕೇಳಿಕೊಂಡರೂ ಸಾಧುಗಳು ಪೋಲಿಸ್ ದೂರನ್ನು ದಾಖಲಿಸಲು ನಿರಾಕರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಘಟನೆಯ ಬಗ್ಗೆ ತನಿಖೆ ನಡೆಯುತ್ತಿದ್ದು,ಸತ್ಯ ಏನು ಎನ್ನುವುದು ಶೀಘ್ರವೇ ಹೊರಬರಲಿದೆ. ಇಂತಹ ಘಟನೆಯು ನಡೆಯಬಾರದಿತ್ತು. ವದಂತಿಗಳನ್ನು ಹರಡಲಾಗಿತ್ತು ಮತ್ತು ಕುಪಿತ ಗುಂಪು ಸಾಧುಗಳನ್ನು ಗುರಿಯಾಗಿಸಿಕೊಂಡಿತ್ತು. ಪೋಲಿಸರು ಸ್ಥಳಕ್ಕೆ ಧಾವಿಸಿ ಅವರನ್ನು ರಕ್ಷಿಸಿದ್ದಾರೆ. ಈ ಘಟನೆ ಸಂಭವಿಸಲು ಏನು ಕಾರಣ ಎನ್ನುವುದನ್ನು ಪೋಲಿಸರು ಪತ್ತೆ ಹಚ್ಚಲಿದ್ದಾರೆ ಎಂದು ಟಿಎಂಸಿ ಪುರುಲಿಯಾ ಜಿಲ್ಲಾಧ್ಯಕ್ಷ ಸೌಮೆನ್ ಬೆಲ್ತಾರಿಯಾ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News