ಉತ್ತರ ಪ್ರದೇಶ ವಿಧಾನಭಾ ವಿಪಕ್ಷ ನಾಯಕನ ಮೇಲೆ ಹಲ್ಲೆ: ಸಮಾಜವಾದಿ ಪಕ್ಷ ಆರೋಪ
ಅಖಿಲೇಶ್ ಯಾದವ್ | PTI
ಗೋರಖ್ ಪುರ್/ಲಕ್ನೊ: ಸಮಾಜವಾದಿ ಪಕ್ಷದ ಹಿರಿಯ ನಾಯಕ ಹಾಗೂ ಉತ್ತರ ಪ್ರದೇಶ ವಿಧಾನಸಭಾ ವಿಪಕ್ಷ ನಾಯಕ ಮಾತಾ ಪ್ರಸಾದ್ ಪಾಂಡೆ ಮೇಲೆ ಸಮಾಜವಿರೋಧಿ ಶಕ್ತಿಗಳು ಹಲ್ಲೆ ನಡೆಸಿವೆ ಎಂದು ಸಮಾಜವಾದಿ ಪಕ್ಷ ಆರೋಪಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಮಾತಾ ಪ್ರಸಾದ್ ಪಾಂಡೆ ಹಾಗೂ ಮಾಜಿ ಶಾಸಕ ಲಾಲ್ ಬಿಹಾರಿ ಯಾದವ್ ಅವರು ಗೋರಖ್ ಪುರ್ ಭೇಟಿಗೆ ತೆರಳಿದ್ದಾಗ, ಅವರ ಮೇಲೆ ಸಮಾಜವಿರೋಧಿ ಶಕ್ತಿಗಳು ಹಲ್ಲೆ ನಡೆಸಿವೆ” ಎಂದು ಆಪಾದಿಸಿದ್ದಾರೆ.
“ಈ ಘಟನೆ ತೀವ್ರ ಖಂಡನೀಯವಾಗಿದ್ದು, ಉತ್ತರ ಪ್ರದೇಶದಲ್ಲಿನ ಪ್ರಜಾಪ್ರಭುತ್ವದ ಸ್ಥಿತಿಯ ಕುರಿತು ಗಂಭೀರ ಕಳವಳವನ್ನುಂಟು ಮಾಡಿದೆ” ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ವಿರಾಸತ್ ಕಾರಿಡಾರ್ ಮೂಲಕ ಹಾದು ಹೋಗಿ, ತಿವಾರಿ ಹತಾದಲ್ಲಿ ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಬೇಕಿದ್ದ ಮಾತಾ ಪ್ರಸಾದ್ ಪಾಂಡೆಯನ್ನು ನಾರ್ಮಲ್ ಚೌರಾಹ ಬಳಿ ತಡೆದ ಬಿಜೆಪಿ ಕಾರ್ಯಕರ್ತರು ಹಾಗೂ ವರ್ತಕರ ಗುಂಪೊಂದು, ಅವರ ವಿರುದ್ಧ ‘ಎಸ್ಪಿ ವಾಪಸು ಹೋಗಿ’ ಎಂಬ ಘೋಷಣೆಗಳನ್ನು ಕೂಗಿತು. ಈ ವೇಳೆ ಸಣ್ಣ ಪ್ರಮಾಣದ ಘರ್ಷಣೆಯೂ ಸಂಭವಿಸಿ. ಸಮಾಜವಾದಿ ಪಕ್ಷದ ವಾಹನಗಳು ಸೇರಿದಂತೆ ಹಲವು ವಾಹನಗಳು ಹಾನಿಗೀಡಾದವು.
ಇದಕ್ಕೆ ಪ್ರತಿಯಾಗಿ, ಮಾತಾ ಪ್ರಸಾದ್ ಪಾಂಡೆ ಹಾಗೂ ಹಲವಾರು ಸಮಾಜವಾದಿ ಕಾರ್ಯಕರ್ತರು ರಸ್ತೆಯಲ್ಲೇ ಧರಣಿ ಕುಳಿತರು. ಬಿಜೆಪಿ ಬೆಂಬಲಿಗರು, ಸದಸ್ಯರು ಹಾಗೂ ವರ್ತಕ ಸಮುದಾಯ ಕೂಡಾ ಅದೇ ಸ್ಥಳದಲ್ಲಿ ಧರಣಿ ನಡೆಸಿದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಚದುರಿಸಿ, ಮಾತಾ ಪ್ರಸಾದ್ ಪಾಂಡೆ ಕೆಲ ಹೊತ್ತು ಕೆಲವು ವರ್ತಕರೊಂದಿಗೆ ಮಾತುಕತೆ ನಡೆಸಿದ ನಂತರ, ಅವರಿಗೆ ಬೇರೆಡೆಗೆ ಪ್ರಯಾಣ ಬೆಳೆಸಲು ಅವಕಾಶ ಮಾಡಿಕೊಟ್ಟರು.
ಬಳಿಕ, ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾತಾ ಪ್ರಸಾದ್ ಪಾಂಡೆ, “ವರ್ತಕರು ತಮ್ಮ ಭೂಮಿಗಳಿಗೆ ನ್ಯಾಯಯುತ ಪರಿಹಾರಗಳನ್ನು ಪಡೆಯುತ್ತಿಲ್ಲ. ರಸ್ತೆ ಅಗಲೀಕರಣಕ್ಕಾಗಿ ಮನೆಗಳನ್ನು ನೆಲಸಮಗೊಳಿಸಿರುವ ಕ್ರಮದಿಂದ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಶೀಲಿಸಲು ನಾವು ಅಲ್ಲಿಗೆ ತೆರಳಿದ್ದಾಗ, ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಬಿಜೆಪಿ ಶಾಸಕ ನಮ್ಮನ್ನು ಮಾರ್ಗಮಧ್ಯದಲ್ಲಿ ತಡೆದರು. ಈ ವೇಳೆ ನಮ್ಮ ವಾಹನಗಳ ಬಾಗಿಲುಗಳನ್ನು ಜಖಂಗೊಳಿಸಲಾಯಿತು” ಎಂದು ಆರೋಪಿಸಿದ್ದಾರೆ.
ಆದರೆ, “ಗೋರಖ್ ಪುರ್ ಹಾಗೂ ಇಡೀ ರಾಜ್ಯ ಕ್ಷಿಪ್ರ ಪ್ರಗತಿಗೆ ಸಾಕ್ಷಿಯಾಗುತ್ತಿರುವಾಗ, ಸಮಾಜವಾದಿ ಪಕ್ಷ ರಾಜಕೀಯ ಲಾಭಕ್ಕಾಗಿ ಇಂತಹ ನಾಟಕೀಯ ಕೃತ್ಯಗಳಲ್ಲಿ ತೊಡಗಿದೆ. ವರ್ತಕ ಸಮುದಾಯಕ್ಕೆ ಈ ಕಾರ್ಯಸೂಚಿ ಅರ್ಥವಾಗಿರುವುದರಿಂದಲೇ, ಈ ಪ್ರತಿಭಟನೆ ನಡೆದಿದೆ” ಎಂದು ಘಟನೆಯನ್ನು ಬಿಜೆಪಿ ಶಾಸಕ ವಿಪಿನ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.