×
Ad

ಉತ್ತರ ಪ್ರದೇಶ ಸಿಎಂ ಆದಿತ್ಯನಾಥರನ್ನು ಹೊಗಳಿದ್ದ ಎಸ್‌ಪಿ ಶಾಸಕಿ ಪಕ್ಷದಿಂದ ಉಚ್ಚಾಟನೆ

Update: 2025-08-14 18:04 IST

ಶಾಸಕಿ ಪೂಜಾ ಪಾಲ್

ಹೊಸದಿಲ್ಲಿ: ಸಮಾಜವಾದಿ ಪಾರ್ಟಿ(ಎಸ್‌ಪಿ)ಯು ಪಕ್ಷವಿರೋಧಿ ಚಟುವಟಿಕೆಗಳು ಮತ್ತು ಅಶಿಸ್ತಿಗಾಗಿ ಶಾಸಕಿ ಪೂಜಾ ಪಾಲ್ ಅವರನ್ನು ಗುರುವಾರ ಪಕ್ಷದಿಂದ ಉಚ್ಚಾಟಿಸಿದೆ. ಪಾಲ್ ಇತ್ತೀಚಿಗೆ ಅಪರಾಧಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿಗಾಗಿ ಮತ್ತು ಅದರಿಂದಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆಗಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥರನ್ನು ಹೊಗಳಿದ್ದರು.

ತನ್ನ ಪತಿಯ ಕೊಲೆ ಕುರಿತು ತನ್ನ ಅಳಲನ್ನು ಬೇರೆ ಯಾರೂ ಕೇಳದಿದ್ದಾಗ ಅದಕ್ಕೆ ಕಿವಿಗೊಟ್ಟಿದ್ದಕ್ಕಾಗಿ ಪಾಲ್ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳಿದ ಬೆನ್ನಿಗೇ ಈ ಉಚ್ಚಾಟನೆ ಆದೇಶ ಹೊರಬಿದ್ದಿದೆ.

ಪೂಜಾ ಪಾಲ್ ಅವರ ಪತಿ ರಾಜು ಪಾಲ್ ಅವರು ಅತೀಕ್ ಅಹ್ಮದ್ ಮತ್ತು ಆತನ ಸಹಚರರಿಂದ ಕೊಲೆಯಾಗಿದ್ದರು.

ಪಾಲ್ ಅವರ ಉಚ್ಚಾಟನೆಯು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದ್ದು,ಆಡಳಿತಾರೂಢ ಬಿಜೆಪಿಯು ಪ್ರತಿಪಕ್ಷವನ್ನು ದಲಿತ ವಿರೋಧಿ ಎಂದು ಆರೋಪಿಸಿದೆ.

ಪೂಜಾ ಪಾಲ್ ಅವರಿಗೆ ಇನ್ನು ಮುಂದೆ ಪಕ್ಷದ ಯಾವುದೇ ಕಾರ್ಯಕ್ರಮಗಳಿಗೆ ಹಾಜರಾಗಲು ಅವಕಾಶವಿಲ್ಲ ಮತ್ತು ಭವಿಷ್ಯದಲ್ಲಿ ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸುವುದಿಲ್ಲ ಎಂದು ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ವಿಝನ್ ಡಾಕ್ಯುಮೆಂಟ್ 2047’ ಕುರಿತು ರಾಜ್ಯ ವಿಧಾನಸಭೆಯಲ್ಲಿ 24 ಗಂಟೆಗಳ ಮ್ಯಾರಾಥಾನ್ ಚರ್ಚೆಯ ಸಂದರ್ಭದಲ್ಲಿ ಪಾಲ್,‌ ‘ನನ್ನ ಪತಿ ರಾಜು ಪಾಲ್‌ರನ್ನು ಹತ್ಯೆ ಮಾಡಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ. ನನಗೆ ನ್ಯಾಯವನ್ನು ಒದಗಿಸಿದ್ದಕ್ಕಾಗಿ ಮತ್ತು ಬೇರೆ ಯಾರೂ ಕೇಳದಿದ್ದಾಗ ನನ್ನ ಅಳಲನ್ನು ಆಲಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಅತೀಕ್ ಅಹ್ಮದ್‌ನಂತಹ ಕ್ರಿಮಿನಲ್‌ಗಳ ಹತ್ಯೆಗೆ ಕಾರಣವಾದ ಶೂನ್ಯ ಸಹಿಷ್ಣುತೆಯಂತಹ ನೀತಿಗಳನ್ನು ತರುವ ಮೂಲಕ ಮುಖ್ಯಮಂತ್ರಿಗಳು ಪ್ರಯಾಗರಾಜ್‌ನಲ್ಲಿಯ ನನ್ನಂತಹ ಅನೇಕ ಮಹಿಳೆಯರಿಗೆ ನ್ಯಾಯವನ್ನು ಒದಗಿಸಿದ್ದಾರೆ. ಇಂದು ಇಡೀ ರಾಜ್ಯವು ಭರವಸೆಯೊಂದಿಗೆ ಅವರತ್ತ ನೋಡುತ್ತಿದೆ’ ಎಂದು ಹೇಳಿದ್ದರು.

2005ರಲ್ಲಿ ಪೂಜಾ ಪಾಲ್ ಅವರೊಂದಿಗೆ ವಿವಾಹದ ಕೆಲವೇ ದಿನಗಳ ಬಳಿಕ ಬಿಎಸ್‌ಪಿ ಶಾಸಕ ರಾಜು ಪಾಲ್ ಅವರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿತ್ತು. ಕೊಲೆಗೆ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ ಪಾಲ್ ಅವರನ್ನೂ ಪ್ರಯಾಗರಾಜ್‌ನ ಸುಲೇಮ್ ಸರಾಯ್ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಮುಖ ಆರೋಪಿಗಳಾಗಿದ್ದ ಅತೀಕ್ ಅಹ್ಮದ್ ಮತ್ತು ಆತನ ಸೋದರ ಅಷ್ರಫ್ ಅಹ್ಮದ್‌ನನ್ನು ಪೋಲಿಸರು ಬಂಧಿಸಿದ್ದರು. 2023, ಎ.15ರ ರಾತ್ರಿ ಪೋಲಿಸರು ಅವರಿಬ್ಬರನ್ನು ವೈದ್ಯಕೀಯ ತಪಾಸಣೆಗಾಗಿ ಪ್ರಯಾಗರಾಜ್‌ನ ಆಸ್ಪತ್ರೆಗೆ ಕರದೊಯ್ಯುತ್ತಿದ್ದಾಗ ಸುದ್ದಿಗಾರರ ಸೋಗಿನಲ್ಲಿದ್ದ ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದರು.

ಪಾಲ್ ಉಚ್ಚಾಟನೆಗಾಗಿ ಎಸ್‌ಪಿಯನ್ನು ಟೀಕಿಸಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಅದು ತನ್ನ ದಲಿತ ವಿರೋಧಿ ಮನಃಸ್ಥಿತಿಯನ್ನು ಬಹಿರಂಗಗೊಳಿಸಿದೆ. ಅಪರಾಧಗಳನ್ನು ನಿಗ್ರಹಿಸುವ ರಾಜ್ಯ ಸರಕಾರದ ಪ್ರಯತ್ನಗಳನ್ನು ಶ್ಲಾಘಿಸಿದ್ದಕ್ಕಾಗಿ ಪಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಎಸ್‌ಪಿ ಅತೀಕ್ ಅಹ್ಮದ್‌ನನ್ನು ವೋಟ್ ಬ್ಯಾಂಕ್ ಆಗಿ ಪರಿಗಣಿಸಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News