ಉತ್ತರ ಪ್ರದೇಶ | ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಉಚ್ಛಾಟನೆ; ದುಬಾರಿಯಾದ ಸಿಎಂ ಆದಿತ್ಯನಾಥ್ ಹೊಗಳುವಿಕೆ!
ಲಕ್ನೋ: ಸಮಾಜವಾದಿ ಪಕ್ಷದ ಶಾಸಕಿ ಪೂಜಾ ಪಾಲ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ತಮ್ಮ ಪತಿ ರಾಜು ಪಾಲ್ ಹತ್ಯೆ ಅಪರಾಧಿಗಳನ್ನು ಯುಪಿ ಸಿಎಂ ಆದಿತ್ಯನಾಥ್ ಎನ್ ಕೌಂಟರ್ ಮಾಡಿದ್ದಾರೆಂದು ಹೊಗಳಿದ ಕೆಲವೇ ಗಂಟೆಗಳ ನಂತರ ಅಖಿಲೇಶ್ ಯಾದವ್ ಈ ನಿರ್ಧಾರ ಪ್ರಕಟಿಸಿದ್ದಾರೆ.
ಪೂಜಾ ಪಾಲ್ ಈ ಹಿಂದೆಯೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರೆಂಬುದು ಗಮನಕ್ಕೆ ಬಂದಿತ್ತು. ಆದರೆ, ಸುಧಾರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿ, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಲಾಗಿತ್ತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಧಾರಿಸಿದ್ದಕ್ಕಾಗಿ ಆದಿತ್ಯನಾಥ್ ಅವರನ್ನು ಪೂಜಾ ಪಾಲ್ ವಿಧಾನಸಭೆ ಅಧಿವೇಶನದಲ್ಲಿ ಹೊಗಳಿದ್ದರು.
ಅತಿಕ್ ಅಹ್ಮದ್‌ನಂಥ ಅಪರಾಧಿಗಳನ್ನು ಎನ್ ಕೌಂಟರ್ ಮಾಡುವ ಮೂಲಕ ನನ್ನಂಥ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಅರ್ಪಿಸುವುದಾಗಿ ಹೇಳಿದ್ದರು.
ನನ್ನ ಪತಿಯನ್ನು ಕೊಂದವರು ಯಾರೆಂದು ಎಲ್ಲರಿಗೂ ತಿಳಿದಿದೆ. ಬೇರೆ ಯಾರೂ ನನ್ನ ಮಾತನ್ನು ಕೇಳದೇ ಇದ್ದಾಗ, ಮುಖ್ಯಮಂತ್ರಿಗಳು ನನ್ನ ಮನವಿಯನ್ನು ಆಲಿಸಿ ನನಗೆ ನ್ಯಾಯ ಒದಗಿಸಿದ್ದರು. ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದರು.
ಅಪರಾಧಿಗಳ ವಿರುದ್ಧ ಶೂನ್ಯ ಸಹಿಷ್ಣುತೆ ನೀತಿ ಜಾರಿಗೆ ತರುವ ಮೂಲಕ ಮುಖ್ಯಮಂತ್ರಿಗಳು ಪ್ರಯಾಗ್ ರಾಜ್‌ನಲ್ಲಿ ನನ್ನಂಥ ಅನೇಕ ಮಹಿಳೆಯರಿಗೆ ನ್ಯಾಯ ಒದಗಿಸಿದ್ದಾರೆ. ಈ ನೀತಿಯಿಂದಾಗಿಯೇ ಅತೀಕ್ ಅಹ್ಮದ್ ನಂಥ ಅಪರಾಧಿಗಳು ಹತರಾದರು ಎಂದು ಪಾಲ್ ಹೇಳಿದ್ದರು.
ಪೂಜಾ ಪಾಲ್ ಈ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಪಕ್ಷದಿಂದ ಹೊರಹಾಕಲಾಗಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅವರನ್ನು ಪಕ್ಷದಿಂದ ತಕ್ಷಣವೇ ಉಚ್ಚಾಟಿಸುವುದಾಗಿ ಘೋಷಿಸಿದರು. ಪಕ್ಷ ವಿರೋಧಿ ಚಟುವಟಿಕೆ ಮತ್ತು ಗಂಭೀರ ಸ್ವರೂಪದ ಅಶಿಸ್ತಿನ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಖಿಲೇಶ್ ಹೇಳಿದ್ದಾರೆ.
ಈ ಹಿಂದೆಯೂ ಅವರಿಗೆ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ದೂ ಅವರು ಅದೇ ನಡವಳಿಕೆ ಮುಂದುವರಿಸಿದ್ದರು. ಇದು ಪಕ್ಷಕ್ಕೆ ಹಾನಿಯುಂಟುಮಾಡಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಪೂಜಾ ಪಾಲ್ ಬಿಎಸ್‌ಪಿ ಶಾಸಕರಾಗಿದ್ದ ರಾಜುಪಾಲ್ ಅವರ ಪತ್ನಿ. ರಾಜು ಪಾಲ್ ಅವರನ್ನು ಜನವರಿ 25, 2005 ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. 2005 ರಲ್ಲಿ ಪೂಜಾ ಪಾಲ್ ಮದುವೆಯಾದ 9 ದಿನಗಳಲ್ಲೇ ರಾಜು ಪಾಲ್ ಕೊಲೆ ನಡೆದಿತ್ತು.
2004 ರ ಉಪಚುನಾವಣೆಯಲ್ಲಿ ರಾಜು ಪಾಲ್ ಗ್ಯಾಂಗ್ ಸ್ಟರ್ ಅತೀಕ್ ಅಹ್ಮದ್ ಸಹೋದರ ಅಶ್ರಫ್ ವಿರುದ್ಧ ಗೆದ್ದಿದ್ದರು. ಈ ರಾಜಕೀಯ ದ್ವೇಷವೇ ಹತ್ಯೆಗೆ ಕಾರಣವೆಂದು ಹೇಳಲಾಗಿತ್ತು. ನಂತರ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅತಿಕ್ ಅಹ್ಮದ್ ಸಹೋದರ ಖಾಲಿದ್ ಅಝೀಮ್ ವಿರುದ್ಧ ಬಿಎಸ್‌ಪಿಯಿಂದ ಪೂಜಾ ಪಾಲ್ ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ಪೂಜಾಗೆ ಸೋಲಾಗಿತ್ತು. ನಂತರ 2007 ಮತ್ತು 2012 ರ ಚುನಾವಣೆಯಲ್ಲಿ ಪೂಜಾ ಪಾಲ್ ಈ ಕ್ಷೇತ್ರದಿಂದ ಗೆದ್ದಿದ್ದರು.
ಈ ಮಧ್ಯೆ ಬಿಜೆಪಿ ನಾಯಕ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿಯಾಗಿದ್ದಕ್ಕೆ ಪೂಜಾ ಪಾಲ್ ಅವರನ್ನು ಫೆಬ್ರವರಿ 2018 ರಲ್ಲಿ ಬಿಎಸ್‌ಪಿಯಿಂದ ಉಚ್ಚಾಟಿಸಲಾಗಿತ್ತು. 2019 ರಲ್ಲಿ ಸಮಾಜವಾದಿ ಪಕ್ಷ ಸೇರಿದ್ದ ಪೂಜಾ ಪಾಲ್ ಕೌಶಂಬಿಯ ಚೈಲ್ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆಯಾಗಿದ್ದರು.