ಪಕ್ಷವಿರೋಧಿ ಚಟುವಟಿಕೆ ಆರೋಪ: ಸಮಾಜವಾದಿ ಪಕ್ಷದಿಂದ ಮೂವರು ಶಾಸಕರ ಉಚ್ಚಾಟನೆ
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (PTI)
ಲಕ್ನೊ: ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸೋಮವಾರ ಮೂವರು ಶಾಸಕರನ್ನು ಸಮಾಜವಾದಿ ಪಕ್ಷ ಉಚ್ಚಾಟಿಸಿದೆ.
ಗೋಸಾಯಿಗಂಜ್ ಕ್ಷೇತ್ರದ ಶಾಸಕ ಅಭಯ್ ಸಿಂಗ್, ಗೌರಿಗಂಜ್ ಕ್ಷೇತ್ರದ ಶಾಸಕ ರಾಕೇಶ್ ಪ್ರತಾಪ್ ಸಿಂಗ್ ಹಾಗೂ ಉಂಚಾಹರ್ ಕ್ಷೇತ್ರದ ಶಾಸಕ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಸಮಾಜವಾದಿ ಪಕ್ಷ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಬಿಡುಗಡೆ ಮಾಡಿರುವ ಅಧಿಕೃತ ಪ್ರಕಟನೆಯಲ್ಲಿ ಹೇಳಿದೆ.
ಸಮಾಜವಾದಿ ಪಕ್ಷದ ಎಲ್ಲರನ್ನೂ ಒಳಗೊಳ್ಳುವಿಕೆ ಹಾಗೂ ಪ್ರಗತಿಪರ ಸಿದ್ಧಾಂತಗಳಿಗೆ ವಿರುದ್ಧವಾಗಿ ಕೋಮುವಾದಿ, ವಿಭಜನಕಾರಿ ಹಾಗೂ ನಕಾರಾತ್ಮಕ ಸೈದ್ಧಾಂತಿಕತೆಗಳನ್ನು ಅನುಮೋದಿಸಿದ ಕಾರಣಕ್ಕಾಗಿ ಈ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಈ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ರೈತ ವಿರೋಧಿ, ಮಹಿಳಾ ವಿರೋಧಿ, ಯುವಕರ ವಿರೋಧಿ, ವ್ಯಾಪಾರ ವಿರೋಧಿ, ಉದ್ಯೋಗ ವಿರೋಧಿ ಹಾಗೂ ಅಂಚಿನ ಸಮುದಾಯಗಳ ಹಕ್ಕುಗಳ ವಿರುದ್ಧವಿರುವ ಶಕ್ತಿಗಳನ್ನು ಈ ಶಾಸಕರು ಬೆಂಬಲಿಸುತ್ತಿದ್ದಾರೆ ಎಂದೂ ಸಮಾಜವಾದಿ ಪಕ್ಷ ಆರೋಪಿಸಿದೆ.
ಈ ನಾಯಕರಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯಾವಕಾಶ ನೀಡಲಾಗಿತ್ತು. ಆದರೆ, ಆ ಸಮಯವೀಗ ಮುಗಿದು ಹೋಗಿದೆ. ಹೀಗಾಗಿ, ಸಾರ್ವಜನಿಕರ ಕಲ್ಯಾಣ ಅಥವಾ ಪಕ್ಷದ ಮೂಲಭೂತ ಸೈದ್ಧಾಂತಿಕ ಚೌಕಟ್ಟಿಗೆ ವಿರುದ್ಧವಾಗಿ ವರ್ತಿಸುವ ವ್ಯಕ್ತಿಗಳಿಗೆ ಪಕ್ಷದಲ್ಲಿ ಯಾವುದೇ ಜಾಗವಿಲ್ಲ ಎಂದೂ ಸಮಾಜವಾದಿ ಪಕ್ಷ ಘೋಷಿಸಿದೆ.
ಒಂದು ವೇಳೆ, ಜನವಿರೋಧಿ ಚಟುವಟಿಕೆಗಳು ಅಥವಾ ಪಕ್ಷದ ಮೂಲಭೂತ ಮೌಲ್ಯಗಳ ವಿರುದ್ಧ ತೊಡಗಿಸಿಕೊಳ್ಳುವ ಯಾವುದೇ ವ್ಯಕ್ತಿ ಪಕ್ಷದಿಂದ ಶಾಶ್ವತ ಉಚ್ಚಾಟನೆ ಎದುರಿಸಲಿದ್ದಾರೆ ಎಂದೂ ಈ ಪ್ರಕಟನೆಯಲ್ಲಿ ಎಚ್ಚರಿಸಲಾಗಿದೆ.