ಸಂಭಾಲ್ ಮಸೀದಿ ಸಮೀಕ್ಷೆ: ವಿಚಾರಣಾ ನ್ಯಾಯಾಲಯದ ಸಮೀಕ್ಷೆ ಆದೇಶವನ್ನು ಎತ್ತಿ ಹಿಡಿದ ಅಲಹಾಬಾದ್ ಹೈಕೋರ್ಟ್
ಹೊಸದಿಲ್ಲಿ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯನ್ನು ನಡೆಸಬೇಕೆಂಬ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ಎತ್ತಿಹಿಡಿದಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಜಿಲ್ಲೆಯ ಜಾಮಾ ಮಸೀದಿ ಮತ್ತು ಹರಿಹರ ಮಂದಿರದ ನಡುವಿನ ನಡೆಯುತ್ತಿರುವ ವಿವಾದದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದಲ್ಲಿ ಯಾವುದೇ ತಪ್ಪು ಕಂಡು ಬಂದಿಲ್ಲ ಎಂದು ನ್ಯಾಯಾಲಯವು ಕಂಡುಕೊಂಡ ನಂತರ ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಕೋರಿ ಮುಸ್ಲಿಂ ಸಮುದಾಯದ ಕಡೆಯಿಂದ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ANI ವರದಿ ಮಾಡಿದೆ.
ಸಂಭಾಲ್ ಮಸೀದಿ ನಿರ್ವಹಣಾ ಸಮಿತಿಯು ಸಂಭಾಲ್ನ ಜಿಲ್ಲಾ ನ್ಯಾಯಾಲಯದ ಮುಂದೆ ಮೂಲ ಮೊಕದ್ದಮೆ ವಿಚಾರಣೆಗೆ ಬಾಕಿಯಿರುವಾಗ ಹೊಸತಾಗಿ ನಡೆಸುತ್ತಿರುವ ವಿಚಾರಣೆಗೆ ತಡೆ ನೀಡಬೇಕೆಂದು ಪರಿಷ್ಕರಣಾ ಅರ್ಜಿಯನ್ನು ಸಲ್ಲಿಸಿತ್ತು.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಹಿಂದೂ ಸಮುದಾಯವನ್ನುಪ್ರತಿನಿಧಿಸುವ ವಕೀಲ ಗೋಪಾಲ್ ಶರ್ಮಾ, “ನವೆಂಬರ್ 19, 2024 ರಂದು ನಾವು ಅರ್ಜಿ ಸಲ್ಲಿಸಿದ್ದೇವೆ. ನ್ಯಾಯಾಲಯವು ಸಮೀಕ್ಷೆಗೆ ಆದೇಶಿಸಿತ್ತು. ಸಮೀಕ್ಷೆಯನ್ನು ಎರಡು ಭಾಗಗಳಲ್ಲಿ ನಡೆಸಲಾಯಿತು. ಜಾಮಾ ಮಸೀದಿಯ ಪರವಾಗಿದ್ದವರು ಸಮೀಕ್ಷೆಯ ವಿರುದ್ಧ ಸುಪ್ರೀಂ ಕೋರ್ಟ್ಗೆ ಹೋಗಿದ್ದರು. ಸುಪ್ರೀಂ ಕೋರ್ಟ್ ಅವರನ್ನು ಹೈಕೋರ್ಟ್ಗೆ ಹೋಗುವಂತೆ ಸೂಚಿಸಿತ್ತು”, ಎಂದರು.