×
Ad

ಸ್ಯಾಮ್ ಸಂಗ್ ನೌಕರರು ಹಾಗೂ ಆಡಳಿತ ಮಂಡಳಿ ನಡುವಿನ ಮಾತುಕತೆ ಮತ್ತೊಮ್ಮೆ ವಿಫಲ: ಪ್ರತಿಭಟನೆ ಮುಂದುವರಿಕೆ

Update: 2025-02-14 23:11 IST

Photo Credit | newindianexpress

ಚೆನ್ನೈ: ಪ್ರತಿಭಟನಾನಿರತ ಸ್ಯಾಮ್ ಸಂಗ್ ಇಂಡಿಯಾ ನೌಕರರು ಹಾಗೂ ಆಡಳಿತ ಮಂಡಳಿಯ ನಡುವೆ ಶುಕ್ರವಾರ ಇಲ್ಲಿ ನಡೆದ ಮಾತುಕತೆ ಮತ್ತೊಮ್ಮೆ ಮುರಿದು ಬಿದ್ದಿದೆ.

ಎರಡೂ ಕಡೆಯವರು ತಮ್ಮ ನಿಲುವುಗಳಿಗೆ ಅಂಟಿಕೊಂಡಿದ್ದರಿಂದ ಒಪ್ಪಂದವೊಂದಕ್ಕೆ ತಲುಪುವ ಪ್ರಯತ್ನಗಳು ವಿಫಲಗೊಂಡಿವೆ. ಹೀಗಾಗಿ, ನಮ್ಮ ಸಂಘಟನೆಯ ಸದಸ್ಯರು ಧರಣಿ ಮುಷ್ಕರವನ್ನು ಮುಂದುವರಿಸಲಿದ್ದಾರೆ ಹಾಗೂ ಆಡಳಿತ ಮಂಡಳಿಯ ಧೋರಣೆ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲಿದ್ದಾರೆ ಎಂದು ಸಿಐಟಿಯು ಅಂಗಸಂಸ್ಥೆಯಾದ ಸ್ಯಾಮ್ ಸಂಗ್ ಇಂಡಿಯಾ ನೌಕರರ ಒಕ್ಕೂಟ ಪ್ರಕಟಿಸಿದೆ.

ಶುಕ್ರವಾರ ನಡೆದ ಮೂರನೆ ಸುತ್ತಿನ ಮಾತುಕತೆಯಲ್ಲಿ ಮೂವರು ನೌಕರರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಸ್ಯಾಮ್ ಸಂಗ್ ಇಂಡಿಯಾ ನೌಕರರ ಒಕ್ಕೂಟವು ಸ್ಯಾಮ್ ಸಂಗ್ ಇಂಡಿಯಾ ಸಂಸ್ಥೆಯನ್ನು ಆಗ್ರಹಿಸಿತು. ಆದರೆ, ಆಡಳಿತ ಮಂಡಳಿಯು ಈ ಬೇಡಿಕೆಯನ್ನು ತಳ್ಳಿ ಹಾಕಿತು.

ಆಡಳಿತ ಮಂಡಳಿಯು ಮೂವರು ನೌಕರರ ವಿರುದ್ಧದ ಅಮಾನತು ಆದೇಶವನ್ನು ರದ್ದುಗೊಳಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಇತ್ತೀಚೆಗೆ ಮಾನ್ಯತೆ ಪಡೆದಿರುವ ಸ್ಯಾಮ್ ಸಂಗ್ ಇಂಡಿಯಾ ನೌಕರರ ಒಕ್ಕೂಟದ ಅಧ್ಯಕ್ಷ ಇ.ಮುತ್ತುಕುಮಾರ್ ಘೋಷಿಸಿದ್ದಾರೆ.

“ಸ್ಯಾಮ್ ಸಂಗ್ ನ ಹಟಮಾರಿ ಧೋರಣೆಯಿಂದಾಗಿ ಇಂದು ನಡೆದ ಮಾತುಕತೆಯಲ್ಲಿ ಯಾವುದೇ ಒಪ್ಪಂದವೇರ್ಪಡಲಿಲ್ಲ” ಎಂದು ತಿಳಿಸಿದ ಮುತ್ತುಕುಮಾರ್, ನೂತನ ಕಾರ್ಮಿಕ ಸಂಘಟನೆಯ ರಚನೆಯಲ್ಲಿ ಪಾತ್ರ ವಹಿಸಿದ್ದರಿಂದ ನೌಕರರನ್ನು ಅವರ ಉನ್ನತ ಅಧಿಕಾರಿಗಳು ಸೇವೆಯಿಂದ ಅಮಾತುಗೊಳಿಸಿದ್ದಾರೆ ಎಂದೂ ಆರೋಪಿಸಿದ್ದಾರೆ.

ಆದರೆ, ನೌಕರರ ಸಂಘಟನೆಯ ಆರೋಪವನ್ನು ಅಲ್ಲಗಳೆದಿರುವ ಸ್ಯಾಮ್ ಸಂಗ್ ಇಂಡಿಯಾ ವಕ್ತಾರರು, ನೌಕರರ ಒಂದು ವರ್ಗ ಚೆನ್ನೈ ಕೈಗಾರಿಕಾ ಆವರಣದಲ್ಲಿ ಕಾನೂನುಬಾಹಿರ ಮುಷ್ಕರದಲ್ಲಿ ತೊಡಗಿದೆ. ಆದರೆ, ಬಹುತೇಕ ಅರ್ಪಣಾ ಮನೋಭಾವದ ನೌಕರರು ಉತ್ಪಾದನೆಗೆ ಯಾವುದೇ ಅಡ್ಡಿಯಾಗದಂತೆ ಖಾತರಿಪಡಿಸಲು ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News