×
Ad

ಸಂಚಾರ ಸಾಥಿ ಆ್ಯಪ್: ಕೇಂದ್ರದ ತರ್ಕವನ್ನು ಪ್ರಶ್ನಿಸಿದ ತರೂರ್

Update: 2025-12-02 21:50 IST

ಶಶಿ ತರೂರ್ | Photo Credit : PTI 

ಹೊಸದಿಲ್ಲಿ,ಡಿ.2: ಮೊಬೈಲ್ ಫೋನ್ ತಯಾರಕರು ಎಲ್ಲ ನೂತನ ಹ್ಯಾಂಡ್‌ ಸೆಟ್‌ಗಳ ಮಾರಾಟಕ್ಕೆ ಮುನ್ನ ಅವುಗಳಲ್ಲಿ ಸಂಚಾರ ಸಾಥಿ ಆ್ಯಪ್‌ ನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿರುವ ದೂರಸಂಪರ್ಕ ಇಲಾಖೆಯ ಆದೇಶವನ್ನು ಮಂಗಳವಾರ ಟೀಕಿಸಿದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು, ಇಂತಹ ಸಾಧನಗಳು ಐಚ್ಛಿಕವಾಗಿರಬೇಕೇ ಹೊರತು ಅವುಗಳನ್ನು ಕಡ್ಡಾಯಗೊಳಿಸಬಾರದು ಎಂದು ಒತ್ತಿ ಹೇಳಿದರು.

ನೂತನ ನೀತಿಯ ಕಡ್ಡಾಯ ಸ್ವರೂಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು,’ನನ್ನ ಸಾಮಾನ್ಯ ಜ್ಞಾನದ ಪ್ರಕಾರ ಇಂತಹ ಆ್ಯಪ್‌ ಗಳು ಸ್ವಯಂಪ್ರೇರಿತವಾಗಿದ್ದರೆ ಉಪಯುಕ್ತವಾಗುತ್ತವೆ. ಅವುಗಳ ಅಗತ್ಯವಿರುವವರು ಅವುಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲವನ್ನೂ ಕಡ್ಡಾಯಗೊಳಿಸುವುದು ತೊಂದರೆದಾಯಕವಾಗುತ್ತದೆ’ ಎಂದರು.

ಇಂತಹ ಕ್ರಮಗಳನ್ನು ಜಾರಿಗೊಳಿಸುವ ಮುನ್ನ ಅದರ ಹಿಂದಿನ ತಾರ್ಕಿಕತೆಯನ್ನು ಸರಕಾರವು ವಿವರಿಸಬೇಕು ಎಂದ ಅವರು, ‘ಸರಕಾರವು ಮಾಧ್ಯಮ ವರದಿಗಳ ಮೂಲಕ ಆದೇಶವನ್ನು ಹೊರಡಿಸುವ ಬದಲು ಸಾರ್ವಜನಿಕರಿಗೆ ಪ್ರತಿಯೊಂದನ್ನೂ ವಿವರಿಸಬೇಕು. ನಾವು ಚರ್ಚೆ ನಡೆಸುವ ಅಗತ್ಯವಿದೆ ಮತ್ತು ಅಲ್ಲಿ ಸರಕಾರವು ನಿರ್ಧಾರದ ಹಿಂದಿನ ತರ್ಕವನ್ನು ವಿವರಿಸಬೇಕು’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News