50 ಲಕ್ಷ ರೂ. ಹಣಕ್ಕೆ ಬೇಡಿಕೆ ; ಕೇಂದ್ರ ಸಚಿವ ಸಂಜಯ್ ಸೇಠ್‌ಗೆ ಬೆದರಿಕೆ
Update: 2024-12-07 22:39 IST
ಸಂಜಯ್ ಸೇಠ್ | PC : ANI
ರಾಂಚಿ : ಹೊಸದಿಲ್ಲಿಯಲ್ಲಿ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡ ಸಂದರ್ಭ ರಾಂಚಿ ಸಂಸದ ಹಾಗೂ ಕೇಂದ್ರದ ಸಹಾಯಕ ಸಚಿವ ಸಂಜಯ್ ಸೇಠ್‌ಗೆ 50 ಲಕ್ಷ ರೂ. ಸುಲಿಗೆ ಹಣದ ಬೇಡಿಕೆ ಇರಿಸಿ ಬೆದರಿಕೆ ಸಂದೇಶ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ದಿನಗಳ ಒಳಗೆ ಸುಲಿಗೆ ಹಣ 50 ಲಕ್ಷ ರೂ. ನೀಡಬೇಕು. ಇಲ್ಲದೇ ಇದ್ದರೆ ಪರಿಣಾಮ ಎದುರಿಸಬೇಕಾದೀತು ಎಂದು ಸಂಜಯ್ ಸೇಠ್ ಅವರ ಮೊಬೈಲ್‌ಗೆ ರವಾನಿಸಿದ ಪಠ್ಯ ಸಂದೇಶದಲ್ಲಿ ಸುಲಿಗೆಕೋರರು ಎಚ್ಚರಿಕೆ ನೀಡಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಸಂಜಯ್ ಸೇಠ್, ‘‘ನಾನು ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಇಂದು ನಾನು ನನ್ನ ಕ್ಷೇತ್ರದಲ್ಲಿ ಇದ್ದೇನೆ. ಪೊಲೀಸರು ತಮ್ಮ ಕೆಲಸ ನಿರ್ವಹಿಸಲಿದ್ದಾರೆ. ನಾನು ನನ್ನ ಕೆಲಸ ಮಾಡಲಿದ್ದೇನೆ’’ ಎಂದು ಹೇಳಿದ್ದಾರೆ