ನಿಮಿಷಾ ಪ್ರಿಯಾ ಜೀವಕ್ಕೆ ತಕ್ಷಣ ಬೆದರಿಕೆ ಇಲ್ಲ; ಸುಪ್ರೀಂ ಕೋರ್ಟ್‌ಗೆ ತಿಳಿಸಿದ ‘ಸೇವ್ ನಿಮಿಷಾ ಪ್ರಿಯಾ ಇಂಟರ್‌ನ್ಯಾಶನಲ್ ಆ್ಯಕ್ಷನ್ ಕೌನ್ಸಿಲ್’
ನಿಮಿಷಾ ಪ್ರಿಯಾ
ಹೊಸದಿಲ್ಲಿ, ಆ. 14: ಕೊಲೆ ಆರೋಪದಲ್ಲಿ ಯೆಮನ್‌ನಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾರ ಪ್ರಾಣಕ್ಕೆ ತಕ್ಷಣದ ಬೆದರಿಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಗುರುವಾರ ತಿಳಿಸಲಾಯಿತು.
‘ಸೇವ್ ನಿಮಿಷಾ ಪ್ರಿಯಾ ಇಂಟರ್ ನ್ಯಾಶನಲ್ ಆ್ಯಕ್ಷನ್ ಕೌನ್ಸಿಲ್’ನ್ನು ಪ್ರತಿನಿಧಿಸುವ ವಕೀಲರೊಬ್ಬರು ಈ ಮಾಹಿತಿಯನ್ನು ಸುಪ್ರೀಂ ಕೋರ್ಟ್‌ಗೆ ನೀಡಿದರು. ಈ ಸಂಘಟನೆಯು ನಿಮಿಷಾ ಪ್ರಿಯಾಗೆ ಪಾಲಕ್ಕಾಡ್‌ನಿಂದ ಕಾನೂನು ನೆರವು ನೀಡುತ್ತಿದೆ.
‘‘ಮಾತುಕತೆಗಳು ನಡೆಯುತ್ತಿವೆ. ಈಗಿನ ಮಟ್ಟಿಗೆ, ಅವರ ಜೀವಕ್ಕೆ ತಕ್ಷಣದ ಬೆದರಿಕೆಯಿಲ್ಲ. ವಿಚಾರಣೆಯನ್ನು ದಯವಿಟ್ಟು ನಾಲ್ಕು ವಾರಗಳ ಕಾಲ ಮುಂದೂಡಿ. ಬಹುಷಃ ಆ ವೇಳೆಗೆ ಎಲ್ಲವೂ ಇತ್ಯರ್ಥಗೊಳ್ಳಬಹುದು’’ ಎಂದು ವಕೀಲರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಪ್ರಿಯಾರ ಮರಣ ದಂಡನೆಯನ್ನು ರದ್ದುಪಡಿಸಲಾಗಿದೆ ಎಂಬುದಾಗಿ ಕೇರಳದ ಮುಫ್ತಿ ಅಬೂಬಕರ್ ಮುಸ್ಲಿಯಾರ್ ಹೇಳಿದ ವಾರಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ತನ್ನ ವಾಣಿಜ್ಯ ಪಾಲುದಾರ ಹಾಗೂ ಯೆಮನ್ ರಾಷ್ಟ್ರೀಯ ತಲಾಲ್ ಅಬ್ದು ಮಹದಿಯನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿರುವ ಕೇರಳದ ಪಾಲಕ್ಕಾಡ್ ನಿವಾಸಿ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ 2020ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು. ಈ ವರ್ಷದ ಜುಲೈ 16ರಂದು ಅವರನ್ನು ಗಲ್ಲಿಗೇರಿಸಬೇಕಾಗಿತ್ತು. ಆದರೆ, ಅದನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ.