ವಕೀಲರ ಮೂಲಕ ಕಳುಹಿಸುವ ತ್ರಿವಳಿ ತಲಾಕ್ ಅಸಿಂಧು: ಸುಪ್ರೀಂ ತೀರ್ಪು
Photo credit: PTI
ಹೊಸದಿಲ್ಲಿ: ತ್ರಿವಳಿ ತಲಾಕ್ ಮೂಲಕ ಪತ್ನಿಗೆ ವಿಚ್ಛೇದನ ನೋಟಿಸ್ ಗಳನ್ನು ನೀಡಲು ಮುಸ್ಲಿಂ ಪುರುಷರು ವಕೀಲರಿಗೆ ಅಧಿಕಾರ ನೀಡುವ ಪದ್ಧತಿಯ ಕ್ರಮಬದ್ಧತೆಯನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ತಲಾ ಒಂದು ತಿಂಗಳ ಅಂತರದಲ್ಲಿ ಮೂರು ನೋಟಿಸ್ ಗಳನ್ನು ನೀಡಿದರೂ, ಅದು ವಿವಾಹ ಸಂಬಂಧ ಕಡಿದುಕೊಳ್ಳುವ ಮೌಲಿಕ ವಿಧಾನವಾಗುವುದಿಲ್ಲ; ಏಕೆಂದರೆ ಈ ನೋಟಿಸ್ ಗಳಲ್ಲಿ ವಿಚ್ಛೇದನ ನೀಡುವ ವ್ಯಕ್ತಿಯ ಸಹಿ ಇರುವುದಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ತಲಾಕ್ ಪ್ರಕ್ರಿಯೆ ಮೂಲಕ ತ್ರಿವಳಿ ತಲಾಕ್ ನೀಡಿ ವಿಚ್ಛೇದನ ಪಡೆಯುವ ಮುಸ್ಲಿಂ ವ್ಯಕ್ತಿಯ ಏಕಪಕ್ಷೀಯ ಹಕ್ಕನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಟಿವಿ ಪತ್ರಕರ್ತೆ ಪರ ಹಾಜರಾದ ವಕೀಲ ರಿಝ್ವಾನ್ ಅಹ್ಮದ್ ಅವರು ನಿಯೋಜಿತ ಸಿಜೆಐ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಯು.ಭುಯಾನ್ ಹಾಗೂ ಎನ್.ಕೆ.ಸಿಂಗ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ವಾದ ಮಂಡಿಸಿ, ಆಕೆಯ ಪತಿ ವಕೀಲರ ಮೂಲಕ ನೋಟಿಸ್ ನೀಡಿ ವಿಚ್ಛೇದನ ಅಂತಿಮಪಡಿಸಿ ಮರು ವಿವಾಹವಾಗಿದ್ದಾಗಿ ಆಪಾದಿಸಿದರು.
"ತಲಾಕ್‌ನಾಮಾದಲ್ಲಿ ಪತಿಯ ಸಹಿ ಇರುವುದಿಲ್ಲವಾದ್ದರಿಂದ ಇದು ಮೌಲಿಕ ವಿಚ್ಛೇದನ ದಾಖಲೆಯಾಗುವುದಿಲ್ಲ. ಈ ದಾಖಲೆಗಳನ್ನು ಆಧರಿಸಿ ಮಹಿಳೆ ಮರು ವಿವಾಹವಾದರೆ, ಮಹಿಳೆಗೆ ಅಧಿಕೃತ ವಿಚ್ಛೇದನ ನೀಡಿಲ್ಲ ಎಂದು ವಾದಿಸಿ ಆಕೆಯ ವಿರುದ್ಧ ಬಹುಪತಿತ್ವದ ಆರೋಪ ಹೊರಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಮರು ವಿವಾಹವಾಗಲು ಬಯಸಿದಲ್ಲಿ, ಈ ವಿಚ್ಛೇದನ ದಾಖಲೆ ಅಸಿಂಧು ಎಂದು ವಾದಿಸಿ ಪುರುಷ ವಿವಾಹ ನಿರಾಕರಿಸಬಹುದು" ಎಂದು ಅಹ್ಮದ್ ವಿವರಿಸಿದರು.
ಹಿರಿಯ ವಕೀಲ ಎಂ.ಆರ್.ಶಂಶದ್ ಪತಿಯ ಕ್ರಮವನ್ನು ಸಮರ್ಥಿಸಿಕೊಂಡರೂ, ನ್ಯಾಯಮೂರ್ತಿ ಕಾಂತ್ ನೇತೃತ್ವದ ಪೀಠ, "ಇದು ಹೇಗೆ ಮೌಲಿಕ ಕ್ರಮವಾಗುತ್ತದೆ? ತಲಾಕ್ ಮತ್ತು ತಲಾಕ್ ನಾಮಾ ನೋಟಿಸ್ ಪತಿಯ ಸಹಿ ಹೊಂದಿರಬೇಕು. ಪತಿಯ ಪರವಾಗಿ ಮೂರನೇ ವ್ಯಕ್ತಿ ಮಹಿಳೆಗೆ ನೋಟಿಸ್ ನೀಡಲು ಹೇಗೆ ಸಾಧ್ಯ?" ಎಂದು ಪ್ರಶ್ನಿಸಿತು. ಇದು ಹೇಗೆ ಕಾನೂನುಬದ್ಧ? ಇಂಥ ಕ್ರಮವನ್ನು ಸಮುದಾಯ ಹೇಗೆ ಉತ್ತೇಜಿಸುತ್ತದೆ? ಮುಸ್ಲಿಂ ಮಹಿಳೆಯ ಘನತೆಗೆ ಹಾನಿ ಮಾಡುವ ಇಂಥ ಪ್ರಕ್ರಿಯೆಗೆ ನಾವು ಅನುಮತಿ ನೀಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.