×
Ad

ಜೈಲಿನಿಂದ ಬಿಡುಗಡೆಯಾದರೂ 'ಪಂಜರ'ದ ಬದುಕು!

Delhi ಗಲಭೆಗಳ ಪಿತೂರಿ ಪ್ರಕರಣ: ಐವರಿಗೆ ಸುಪ್ರೀಂ ಕೋರ್ಟ್ ಜಾಮೀನು; ಷರತ್ತುಗಳು ಕಠಿಣ

Update: 2026-01-06 12:49 IST

ಹೊಸದಿಲ್ಲಿ: 2020ರ ದಿಲ್ಲಿ ಗಲಭೆಗಳ 'ದೊಡ್ಡ ಪಿತೂರಿ’ ಪ್ರಕರಣದಲ್ಲಿ ಆರೋಪಿಗಳ ಪೈಕಿ ಐವರಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್, ವಿಚಾರಣೆಯ ಅಂತ್ಯದವರೆಗೆ ಅವರ ಚಲನವಲನ, ಭಾಷಣ, ಸಾರ್ವಜನಿಕ ಭಾಗವಹಿಸುವಿಕೆಗೆ ತೀವ್ರ ನಿರ್ಬಂಧಗಳನ್ನು ವಿಧಿಸಿದೆ.

ರಾಷ್ಟ್ರೀಯ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ವಿಚಾರಣೆಯ ಸಮಗ್ರತೆ ಕುರಿತ ಆತಂಕಗಳನ್ನು ಉಲ್ಲೇಖಿಸಿರುವ ನ್ಯಾಯಾಲಯ, ಜಾಮೀನಿನೊಂದಿಗೆ ವ್ಯಾಪಕ ‘ಸುರಕ್ಷತಾ ಕ್ರಮಗಳು’ ಅನಿವಾರ್ಯವೆಂದು ಹೇಳಿದೆ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿ ಹಲವು ವರ್ಷಗಳಿಂದ ಬಂಧನದಲ್ಲಿದ್ದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ-ಉರ್-ರೆಹಮಾನ್, ಮುಹಮ್ಮದ್ ಸಲೀಮ್ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಜಾಮೀನು ನೀಡಿದೆ.

ನ್ಯಾಯಾಲಯದ ಆದೇಶದಂತೆ, ಪ್ರತಿಯೊಬ್ಬ ಆರೋಪಿಯೂ ವಿಚಾರಣಾ ನ್ಯಾಯಾಲಯದಲ್ಲಿ 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ಸಲ್ಲಿಸಬೇಕು. ಜೊತೆಗೆ, ಅದೇ ಮೊತ್ತದ ಇಬ್ಬರು ಸ್ಥಳೀಯ ಶ್ಯೂರಿಟಿಗಳನ್ನು ಒದಗಿಸಬೇಕಿದೆ. ಅನುಮತಿ ಇಲ್ಲದೆ ದಿಲ್ಲಿ NCR ಪ್ರದೇಶವನ್ನು ತೊರೆಯಲು ಅವಕಾಶವಿಲ್ಲ. ದಿಲ್ಲಿಯ ಹೊರಗೆ ಪ್ರಯಾಣಿಸಲು ಸಲ್ಲಿಸುವ ಯಾವುದೇ ಮನವಿಯಲ್ಲಿ ಕಾರಣಗಳನ್ನು ಸ್ಪಷ್ಟವಾಗಿ ನಮೂದಿಸಬೇಕು; ಅಂತಹ ಮನವಿಗಳನ್ನು ವಿಚಾರಣಾ ನ್ಯಾಯಾಲಯ ಕಟ್ಟುನಿಟ್ಟಾಗಿ ಪರಿಶೀಲಿಸಲಿದೆ.

ಆರೋಪಿಗಳು ತಮ್ಮ ಪಾಸ್‌ಪೋರ್ಟ್‌ಗಳನ್ನು ವಶಕ್ಕೆ ಒಪ್ಪಿಸಬೇಕು. ಪಾಸ್‌ಪೋರ್ಟ್ ಇಲ್ಲದಿದ್ದಲ್ಲಿ, ಅದನ್ನು ದೃಢೀಕರಿಸುವ ಅಫಿಡವಿಟ್ ಸಲ್ಲಿಸುವುದು ಕಡ್ಡಾಯ. ವಿಚಾರಣಾ ನ್ಯಾಯಾಲಯದ ಸ್ಪಷ್ಟ ಅನುಮತಿಯಿಲ್ಲದೆ ಯಾವುದೇ ಸಂದರ್ಭದಲ್ಲೂ ಆರೋಪಿಗಳು ಭಾರತವನ್ನು ತೊರೆಯದಂತೆ ದೇಶಾದ್ಯಂತದ ವಲಸೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಇದಲ್ಲದೆ, ಆರೋಪಿಗಳು ತಮ್ಮ ಪ್ರಸ್ತುತ ನಿವಾಸ ವಿಳಾಸ, ಸಂಪರ್ಕ ಸಂಖ್ಯೆ ಹಾಗೂ ಇಮೇಲ್ ಐಡಿಗಳನ್ನು ತನಿಖಾಧಿಕಾರಿ ಮತ್ತು ವಿಚಾರಣಾ ನ್ಯಾಯಾಲಯಕ್ಕೆ ಒದಗಿಸಬೇಕು. ವಿಳಾಸ ಅಥವಾ ಸಂಪರ್ಕ ವಿವರಗಳಲ್ಲಿ ಬದಲಾವಣೆ ಇದ್ದಲ್ಲಿ, ಕನಿಷ್ಠ 7 ದಿನಗಳ ಮುಂಚಿತವಾಗಿ ಲಿಖಿತವಾಗಿ ಮಾಹಿತಿ ನೀಡಬೇಕಾಗಿದೆ.

ನ್ಯಾಯಾಲಯ ವಿಧಿಸಿರುವ ಅತ್ಯಂತ ಕಠಿಣ ಷರತ್ತುಗಳಲ್ಲಿ, ಐವರು ಆರೋಪಿಗಳು ಪ್ರತಿ ವಾರ ಎರಡು ಬಾರಿ ಸೋಮವಾರ ಮತ್ತು ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12ರ ಮಧ್ಯೆ ಜೈ ಸಿಂಗ್ ಮಾರ್ಗದಲ್ಲಿರುವ ದಿಲ್ಲಿ ಪೊಲೀಸ್ ಪ್ರಧಾನ ಕಚೇರಿಯ ಕ್ರೈಂ ಬ್ರಾಂಚ್ ಪೊಲೀಸ್ ಠಾಣೆಯಲ್ಲಿ ಹಾಜರಾಗಬೇಕು. ಪ್ರತಿ ಆರೋಪಿಗೆ ಪ್ರತ್ಯೇಕ ಹಾಜರಾತಿ ರಿಜಿಸ್ಟರ್‌ನ್ನು ನಿರ್ವಹಿಸುವಂತೆ ಮತ್ತು ಅದರ ಕುರಿತ ಮಾಸಿಕ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಠಾಣಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.

ಆರೋಪಿಗಳ ಸಂವಹನ ಮತ್ತು ಸಾರ್ವಜನಿಕ ಉಪಸ್ಥಿತಿಯ ಮೇಲೆಯೂ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿ ಅಥವಾ ವ್ಯಕ್ತಿಯನ್ನು ಸಂಪರ್ಕಿಸುವುದು, ಪ್ರಭಾವಿಸುವುದು, ಬೆದರಿಸುವುದು ಅಥವಾ ಸಂಪರ್ಕಿಸಲು ಪ್ರಯತ್ನಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ. ಎಫ್‌ಐಆರ್ ವಿಷಯಕ್ಕೆ ಸಂಬಂಧಿಸಿದ ಯಾವುದೇ ಗುಂಪು ಅಥವಾ ಸಂಘಟನೆಯ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೂ ಅವಕಾಶವಿಲ್ಲ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗಂಭೀರವಾಗಿ ಸೀಮಿತಗೊಳಿಸುವಂತೆ, ವಿಚಾರಣೆ ಮುಗಿಯುವವರೆಗೆ ಪ್ರಕರಣ ಅಥವಾ ಅದರಲ್ಲಿ ಭಾಗಿಯಾದವರ ಕುರಿತು ಯಾವುದೇ ಹೇಳಿಕೆ, ಲೇಖನ ಅಥವಾ ಅಭಿಪ್ರಾಯವನ್ನು ಮುದ್ರಿತ, ಎಲೆಕ್ಟ್ರಾನಿಕ್ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವುದು, ಪೋಸ್ಟ್ ಮಾಡುವುದು ಅಥವಾ ಪ್ರಸಾರ ಮಾಡುವುದನ್ನು ನ್ಯಾಯಾಲಯ ನಿಷೇಧಿಸಿದೆ. ಭೌತಿಕವಾಗಲಿ ಅಥವಾ ವರ್ಚುವಲ್ ಆಗಲಿ ಯಾವುದೇ ಕಾರ್ಯಕ್ರಮ, ಸಭೆ, ರ‍್ಯಾಲಿ ಅಥವಾ ಸಮಾವೇಶದಲ್ಲಿ ಮಾತನಾಡುವುದು ಅಥವಾ ಹಾಜರಾಗುವುದೂ, ಜೊತೆಗೆ ಯಾವುದೇ ರೀತಿಯ ಪೋಸ್ಟರ್‌, ಬ್ಯಾನರ್‌, ಕರಪತ್ರಗಳು ಅಥವಾ ಸಮಾನ ವಸ್ತುಗಳನ್ನು ಹಂಚಿಕೊಳ್ಳುವುದೂ ನಿರ್ಬಂಧಿತವಾಗಿದೆ.

ವಿಚಾರಣೆಗೆ ಸಂಪೂರ್ಣ ಸಹಕರಿಸಬೇಕು; ಔಪಚಾರಿಕ ವಿನಾಯಿತಿ ಇಲ್ಲದೆ ಪ್ರತಿಯೊಂದು ವಿಚಾರಣಾ ದಿನದಂದು ಹಾಜರಾಗಬೇಕು; ವಿಚಾರಣೆಯನ್ನು ವಿಳಂಬಗೊಳಿಸುವ ಯಾವುದೇ ನಡವಳಿಕೆಯಿಂದ ದೂರವಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ಶಾಂತಿ ಮತ್ತು ಉತ್ತಮ ನಡವಳಿಕೆಯನ್ನು ಕಾಪಾಡಿಕೊಳ್ಳುವಂತೆ ಆರೋಪಿಗಳಿಗೆ ಸೂಚಿಸಲಾಗಿದೆ.

ಷರತ್ತುಗಳ ಉಲ್ಲಂಘನೆ ಅಥವಾ ನೀಡಲಾದ ಸ್ವಾತಂತ್ರ್ಯದ ದುರುಪಯೋಗ ಮಾಡಿದರೆ, ಜಾಮೀನು ರದ್ದುಗೊಳಿಸುವಂತೆ ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಬಹುದಾಗಿದೆ. ಅಂತಹ ಸಂದರ್ಭದಲ್ಲಿ ಆರೋಪಿಗೆ ವಾದಿಸಲು ಅವಕಾಶ ನೀಡಿದ ಬಳಿಕ, ವಿಚಾರಣಾ ನ್ಯಾಯಾಲಯ ಜಾಮೀನು ರದ್ದುಗೊಳಿಸಲು ಮುಕ್ತವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಬಂಧನದಿಂದ ಆರೋಪಿಗಳು ಬಿಡುಗಡೆಯಾದರೂ, ವಿಧಿಸಲಾದ ವ್ಯಾಪಕ ನಿರ್ಬಂಧಗಳು ವಿಚಾರಣೆ ಪೂರ್ಣಗೊಳ್ಳುವವರೆಗೆ ಅವರನ್ನು ನಿರಂತರ ಕಣ್ಗಾವಲಿನಡಿಯಲ್ಲಿ ಇಡುವುದರೊಂದಿಗೆ, ಅವರ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮಿತಿಗೊಳಿಸುತ್ತವೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಇಸ್ಮಾಯಿಲ್ ಝೋರೇಝ್

contributor

Similar News