ಹಿಂದೂ, ಬೌದ್ಧ, ಸಿಖ್ಖರನ್ನು ಹೊರತುಪಡಿಸಿ ಇನ್ನುಳಿದವರ ಎಸ್ಸಿ ಪ್ರಮಾಣ ಪತ್ರ ರದ್ದುಗೊಳಿಸಲಾಗುವುದು : ಮಹಾರಾಷ್ಟ್ರ ಸಿಎಂ ಫಡ್ನವೀಸ್
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (PTI)
ಮುಂಬೈ: ಹಿಂದೂ, ಬೌದ್ಧ ಹಾಗೂ ಸಿಖ್ ಹೊರತಾಗಿ ಬೇರೆ ಯಾರಾದರೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದರೆ, ಅಂಥವರ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ನಕಲಿ ಜಾತಿ ಪ್ರಮಾಣ ಪತ್ರ ಪಡೆದು, ಸರಕಾರಿ ಉದ್ಯೋಗದಂತಹ ಯಾವುದಾದರೂ ಮೀಸಲಾತಿ ಲಾಭವನ್ನು ಪಡೆದಿದ್ದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಫಡ್ನವಿಸ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ʼಅಕ್ರಮವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು, ಚುನಾವಣೆಯಲ್ಲಿ ಗೆಲುವು ಸಾಧಿಸಿರುವವರ ಫಲಿತಾಂಶವನ್ನು ಅನೂರ್ಜಿತ ಹಾಗೂ ಅಕ್ರಮ ಎಂದು ಘೋಷಿಸಲಾಗುವುದುʼ ಎಂದು ಎಚ್ಚರಿಕೆ ನೀಡಿದರು.
ಬಲವಂತವಾಗಿ ಮತ್ತು ವಂಚನೆ ಮೂಲಕ ಧಾರ್ಮಿಕ ಮತಾಂತರ ನಡೆಸುವುದನ್ನು ತಡೆಯಲು ಬಲವಾದ ನಿಯಮಗಳನ್ನು ಹೊಂದಿರುವ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲು ಸರಕಾರ ಉದ್ದೇಶಿಸಿದೆ ಎಂದು ಅವರು ಇದೇ ವೇಳೆ ಪ್ರಕಟಿಸಿದರು.
ಪರಿಶಿಷ್ಟ ಜಾತಿ ಪ್ರವರ್ಗದ ಮೀಸಲಾತಿ ಲಾಭವನ್ನು ಕೇವಲ ಹಿಂದೂಗಳು, ಬೌದ್ಧರು ಹಾಗೂ ಸಿಖ್ಖರು ಮಾತ್ರ ಪಡೆಯಬಹುದು. ಇತರೆ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಈ ಲಾಭವನ್ನು ಪಡೆಯುವಂತಿಲ್ಲ ಎಂದು ನವೆಂಬರ್ 26, 2024ರಂದು ಸುಪ್ರೀಂ ಕೋರ್ಟ್ ಕೂಡಾ ತೀರ್ಪು ನೀಡಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.
“ಹಿಂದೂ, ಬೌದ್ಧ ಹಾಗೂ ಸಿಖ್ ಧರ್ಮಕ್ಕೆ ಸೇರಿದವರಲ್ಲದ ಬೇರೆ ಯಾರಾದರೂ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಅಥವಾ ಮೀಸಲಾತಿಯನ್ನು ಪಡೆದಿದ್ದರೆ, ಸೂಕ್ತ ಕ್ರಮಗಳ ಮೂಲಕ ಅಂಥವರ ಜಾತಿ ಪ್ರಮಾಣ ಪತ್ರಗಳ ಮಾನ್ಯತೆಯನ್ನು ಅನೂರ್ಜಿತಗೊಳಿಸಲಾಗುವುದು ಹಾಗೂ ಅವನ್ನು ರದ್ದುಗೊಳಿಸಲಾಗುವುದು. ಯಾರಾದರೂ ಸರಕಾರಿ ಉದ್ಯೋಗದಂಥ ಲಾಭಗಳನ್ನು ಪಡೆದಿದ್ದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಎಚ್ಚರಿಕೆ ನೀಡಿದರು.