"ಆಕೆ ಕೊಲೆಗಾರ್ತಿ ಅಥವಾ ಭಯೋತ್ಪಾದಕಿ ಅಲ್ಲ": ಮಾಜಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್
ಪೂಜಾ ಖೇಡ್ಕರ್ (Photo: PTI)
ಹೊಸ ದಿಲ್ಲಿ: 2022ರ ನಾಗರಿಕ ಸೇವಾ ಪ್ರವೇಶ ಪರೀಕ್ಷೆಗೆ ಅರ್ಹತೆ ಗಿಟ್ಟಿಸಲು ದಾಖಲೆಗಳನ್ನು ತಿದ್ದಿದ ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ದುರುಪಯೋಗಪಡಿಸಿಕೊಂಡ ಆರೋಪ ಎದುರಿಸುತ್ತಿರುವ ಮಾಜಿ ತರಬೇತಿ ನಿರತ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್‌ಗೆ ಬುಧವಾರ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಪೂಜಾ ಖೇಡ್ಕರ್ ತನಿಖೆಗೆ ಸಹರಿಸುತ್ತಿಲ್ಲ ಎಂದು ಆರೋಪಿಸಿದ ದಿಲ್ಲಿ ಪೊಲೀಸರು, ಅವರಿಗೆ ಜಾಮೀನು ಮಂಜೂರು ಮಾಡಲು ತೀವ್ರ ವಿರೋಧ ವ್ಯಕ್ತಪಡಿಸಿದರು . ಈ ವೇಳೆ, "ಪೂಜಾ ಖೇಡ್ಕರ್ ಓರ್ವ ಮಾದಕ ದ್ರವ್ಯ ಜಾಲದ ನಾಯಕಿಯಾಗಲಿ ಅಥವಾ ಭಯೋತ್ಪಾದಕಿಯಾಗಲಿ ಅಲ್ಲ" ಎಂದು ನ್ಯಾಯಾಲಯ ಸೂಚ್ಯವಾಗಿ ಹೇಳಿತು.
"ಆಕೆಯೇನು ಮಾದಕ ದ್ರವ್ಯ ಜಾಲದ ಅಪರಾಧಿಯಲ್ಲ. ನೀವು ಒಂದು ವ್ಯವಸ್ಥೆ ಅಥವಾ ತಂತ್ರಾಂಶವನ್ನು ಹೊಂದಿರಬೇಕು. ಆಕೆ ಎಲ್ಲವನ್ನೂ ಕಳೆದುಕೊಂಡಿದ್ದು, ಇನ್ನೆಲ್ಲೂ ಆಕೆಗೆ ಉದ್ಯೋಗ ದೊರೆಯುವುದಿಲ್ಲ" ಎಂದು ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, "ದಿಲ್ಲಿ ಹೈಕೋರ್ಟ್ ಆಕೆಗೆ ಜಾಮೀನು ಮಂಜೂರು ಮಾಡುವುದನ್ನು ಪರಿಗಣಿಸಬೇಕಿತ್ತು" ಎಂದೂ ಹೇಳಿತು.
2022ರ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಲು ತಮ್ಮ ಪ್ರಮಾಣ ಪತ್ರಗಳನ್ನು ತಿರುಚಿದ ಹಾಗೂ ತನ್ನ ಕುಟುಂಬದ ಆದಾಯ ಸ್ಥಿತಿ ಹಾಗೂ ಇನ್ನಿತರ ವಿವರಗಳನ್ನು ತಪ್ಪಾಗಿ ನಮೂದಿಸಿದ ಆರೋಪಗಳನ್ನು ಮಾಜಿ ತರಬೇತಿ ನಿರತ ಐಎಎಸ್ ಅಧಿಕಾರಿಣಿ ಪೂಜಾ ಖೇಡ್ಕರ್ ಎದುರಿಸುತ್ತಿದ್ದಾರೆ.