ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ನಿರ್ಬಂಧ
ಸಿದ್ಧಾರ್ಥ್ ವರದರಾಜನ್
ಹೊಸದಿಲ್ಲಿ : ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಮತ್ತು ಇತರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಅಸ್ಸಾಂ ಪೊಲೀಸರಿಗೆ ಸುಪ್ರೀಂ ಕೋರ್ಟ್ ನಿರ್ಬಂಧವನ್ನು ವಿಧಿಸಿದೆ.
ಸುದ್ದಿ ಲೇಖನವೊಂದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್ಐಆರ್‌ಗೆ ಸಂಬಂಧಿಸಿ ʼದಿ ವೈರ್ʼ ವೆಬ್ ಸೈಟ್‌ನ ಹಿರಿಯ ಪತ್ರಕರ್ತ ಸಿದ್ಧಾರ್ಥ್ ವರದರಾಜನ್ ಸೇರಿದಂತೆ ಇತರ ಪತ್ರಕರ್ತರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಅಸ್ಸಾಂ ಪೊಲೀಸರಿಗೆ ನಿರ್ಬಂಧಿಸಿದೆ.
ಪತ್ರಕರ್ತರ ಪರವಾಗಿ ಹಾಜರಾದ ಹಿರಿಯ ವಕೀಲರಾದ ನಿತ್ಯ ರಾಮಕೃಷ್ಣನ್ ಅವರು ನ್ಯಾಯಾಲಯ ನೀಡಿದ ಹಿಂದಿನ ಆದೇಶಗಳನ್ನು ಅಸ್ಸಾಂ ಪೊಲೀಸರು ಉಲ್ಲಂಘಿಸುತ್ತಿದ್ದಾರೆ ಎಂದು ಹೇಳಿದ ನಂತರ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಆದೇಶವನ್ನು ಹೊರಡಿಸಿದೆ.
ಮೇ ತಿಂಗಳಲ್ಲಿ ದಾಖಲಾಗಿದ್ದ ಎಫ್ಐಆರ್‌ನಲ್ಲಿ ಹೇಳಿಕೆಗಳನ್ನು ದಾಖಲಿಸಲು ವರದರಾಜನ್ ಸೇರಿದಂತೆ ಇತರ ಪತ್ರಕರ್ತರಿಗೆ ಶುಕ್ರವಾರ ಸಮನ್ಸ್ ಜಾರಿಯಾಗಿದ್ದು, ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ನಿತ್ಯ ರಾಮಕೃಷ್ಣನ್ ಅವರು ಕೋರ್ಟ್ ಗಮನಕ್ಕೆ ತಂದಿದ್ದರು.
ಆಪರೇಷನ್ ಸಿಂಧೂರ್ ಬಗ್ಗೆ ಲೇಖನದ ಕುರಿತು ವರದರಾಜನ್ ವಿರುದ್ಧ ದಾಖಲಾಗಿರುವ ಎಫ್ಐಆರ್‌ಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆಗಸ್ಟ್ 12ರಂದು ಸುಪ್ರೀಂ ಕೋರ್ಟ್ ನಿರ್ಬಂಧ ವಿಧಿಸಿತ್ತು.