×
Ad

ಡಿಜಿಟಲ್ ಅರೆಸ್ಟ್ | ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹಿ ನಕಲಿ ಮಾಡಿ, ಪುಣೆಯ ಮಹಿಳೆಗೆ 99 ಲಕ್ಷ ರೂ. ವಂಚನೆ

Update: 2025-11-12 19:11 IST

ನಿರ್ಮಲಾ ಸೀತಾರಾಮನ್ | Photo Credit : PTI 

ಪುಣೆ: ಪುಣೆಯಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ನಡೆದಿದೆ ಎಂದು ವರದಿಯಾಗಿದ್ದು, ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿಯನ್ನು ನಕಲು ಮಾಡಿರುವ ಸೈಬರ್ ವಂಚಕರು, ನಕಲಿ ಬಂಧನದ ವಾರೆಂಟ್ ತೋರಿಸಿ, 62 ವರ್ಷದ ನಿವೃತ್ತ ಎಲ್ಐಸಿ ಮಹಿಳಾ ಉದ್ಯೋಗಿಯೊಬ್ಬರಿಗೆ ಸುಮಾರು 99 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.

ಅಕ್ಟೋಬರ್ ತಿಂಗಳ ಕೊನೆಯ ವಾರ ಮಹಿಳೆಯೊಬ್ಬರಿಗೆ ಕರೆ ಮಾಡಿರುವ ಸೈಬರ್ ವಂಚಕರು, ನಾವು ಡಾಟಾ ಪ್ರೊಟೆಕ್ಷನ್ ಏಜೆನ್ಸಿಯ ಪ್ರತಿನಿಧಿಗಳು ಎಂದು ಹೇಳಿಕೊಂಡಿದ್ದಾರೆ. ಬಳಿಕ, ನಿಮ್ಮ ಆಧಾರನೊಂದಿಗೆ ಸಂಪರ್ಕಿಸಲಾಗಿರುವ ಮೊಬೈಲ್ ಸಂಖ್ಯೆಯನ್ನು ವಂಚಕ ವ್ಯವಹಾರಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಅವರನ್ನು ಬೆದರಿಸಿದ್ದಾರೆ ಎಂದು ಪುಣೆ ನಗರ ಸೈಬರ್ ಪೊಲೀಸರು ತಿಳಿಸಿದ್ದಾರೆ.

ಇದಾದ ನಂತರ, ಹಿರಿಯ ಪೊಲೀಸ್ ಅಧಿಕಾರಿ ಎಂದು ಹೇಳಲಾಗಿರುವ ಜಾರ್ಜ್ ಮ್ಯಾಥ್ಯೂ ಎಂಬಾತನೊಂದಿಗೆ ಆಕೆಯನ್ನು ಸಂಪರ್ಕಿಸಲಾಗಿದೆ. ಈ ವಿಡಿಯೊ ಕರೆಯ ವೇಳೆ ಪೊಲೀಸ್ ಅಧಿಕಾರಿಯಂತೆ ಸೋಗು ಹಾಕಿದ್ದ ಆ ವ್ಯಕ್ತಿ, ನೀವು ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿದ್ದೀರಿ ಹಾಗೂ ನಿಮ್ಮ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರನ್ನು ಬೆದರಿಸಿದ್ದಾನೆ. ಬಳಿಕ, ತಮ್ಮ ಬೆದರಿಕೆಗೆ ಪುಷ್ಟಿ ಒದಗಿಸಲು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಹಿಯನ್ನು ಹೊಂದಿರುವ ನಕಲಿ ಅರೆಸ್ಟ್ ವಾರೆಂಟ್ ಪ್ರತಿಯನ್ನು ಅವರಿಗೆ ಕಳಿಸಿದ್ದಾನೆ. ಈ ನಕಲಿ ಅರೆಸ್ಟ್ ವಾರೆಂಟ್ ನಲ್ಲಿ ಸರಕಾರದ ಅಧಿಕೃತ ಮುದ್ರೆಯಿರುವಂತೆ ಕಂಡು ಬಂದಿದೆ.

“ನಿಮಗೆ ವಯಸ್ಸಾಗಿರುವುದರಿಂದ ನಾವು ನಿಮ್ಮನ್ನು ಡಿಜಿಟಲ್ ಅರೆಸ್ಟ್ ನಲ್ಲಿರಿಸುತ್ತೇವೆ” ಎಂದು ವಂಚಕರು ಹೇಳಿದ್ದಾರೆ ಹಾಗೂ ಅವರ ಎಲ್ಲ ಠೇವಣಿಯನ್ನು ಪರಿಶೀಲನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಈ ಮಾತನ್ನು ನಂಬಿರುವ ಸಂತ್ರಸ್ತ ಮಹಿಳೆ, ವಿವಿಧ ಬ್ಯಾಂಕ್ ಖಾತೆಗಳಿಗೆ ಸುಮಾರು 99 ಲಕ್ಷ ರೂ.ನಷ್ಟು ಮೊತ್ತವನ್ನು ವರ್ಗಾಯಿಸಿದ್ದಾರೆ. ಇದಾದ ಬಳಿಕವಷ್ಟೇ, ಅವೆಲ್ಲ ಪುಣೆ ಮೂಲದ ಸೈಬರ್ ಅಪರಾಧದ ಜಾಲ ನಿಯಂತ್ರಿಸುತ್ತಿರುವ ಖಾತೆಗಳು ಎಂಬ ಸಂಗತಿ ಅವರಿಗೆ ಮನವರಿಕೆಯಾಗಿದೆ.

ತಮ್ಮ ವಂಚನೆಯನ್ನು ಸಮರ್ಥಿಸಿಕೊಳ್ಳಲು ಸೈಬರ್ ವಂಚಕರು ಜಾರಿ ನಿರ್ದೇಶನಾಲಯ(ಈಡಿ)ದ ನಕಲಿ ರಸೀದಿ ಸೇರಿದಂತೆ ಹೆಚ್ಚುವರಿ ತಿರುಚಿದ ದಾಖಲೆಗಳನ್ನೂ ಆಕೆಯೊಂದಿಗೆ ಹಂಚಿಕೊಂಡಿದ್ದಾರೆ. ಮಹಿಳೆಯು ಆ ವಂಚಕರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಆ ಮೊಬೈಲ್ ಸಂಖ್ಯೆಗಳು ಸ್ವಿಚ್ಡ್ ಆಫ್ ಆಗಿರುವುದು ಕಂಡು ಬಂದಿದೆ. ಆಗ ತಾನು ಮೋಸ ಹೋಗಿದ್ದೇನೆ ಎಂದು ಅವರಿಗೆ ಅರಿವಾಗಿದ್ದು, ಪುಣೆ ನಗರ ಸೈಬರ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಈ ದೂರನ್ನು ಆಧರಿಸಿ, ವಂಚನೆಗೆ ಬಳಸಲಾಗಿರುವ ಮೊಬೈಲ್ ಸಂಖ್ಯೆಗಳು ಹಾಗೂ ಬ್ಯಾಂಕ್ ಖಾತೆಗಳನ್ನು ಪತ್ತೆ ಹಚ್ಚುವ ಪ್ರಕ್ರಿಯೆಗೆ ತನಿಖಾಧಿಕಾರಿಗಳು ಚಾಲನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News