×
Ad

ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರಿಗೆ ಶೇ.33 ಕೋಟಾಕ್ಕೆ ಎಸ್‌ಸಿಬಿಎ ಮಾಜಿ ಅಧ್ಯಕ್ಷರ ಒತ್ತು

Update: 2023-09-24 22:52 IST

ಹೊಸದಿಲ್ಲಿ, : ಸರ್ವೋಚ್ಚ ನ್ಯಾಯಾಲಯದ ವಕೀಲರ ಸಂಘ (ಎಸ್‌ಸಿಬಿಎ)ದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ವಿಕಾಸ ಸಿಂಗ್ ಅವರು ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರಿಗೆ ಬರೆದಿರುವ ಪತ್ರದಲ್ಲಿ ಉನ್ನತ ನ್ಯಾಯಾಂಗಕ್ಕೆ ನ್ಯಾಯಾಧೀಶರ ನೇಮಕಾತಿಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಕೋಟಾ ಒದಗಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ.

ಪಟ್ನಾ,ಉತ್ತರಾಖಂಡ,ತ್ರಿಪುರಾ,ಮೇಘಾಲಯ ಮತ್ತು ಮಣಿಪುರ ಉಚ್ಚ ನ್ಯಾಯಾಲಯಗಳಲ್ಲಿ ಒಬ್ಬರೂ ಮಹಿಳಾ ನ್ಯಾಯಾಧೀಶರಿಲ್ಲ ಮತ್ತು ಉಳಿದ ಉಚ್ಚ ನ್ಯಾಯಾಲಯಗಳಲ್ಲಿ 670 ಪುರುಷ ನ್ಯಾಯಾಧೀಶರಿಗೆ ಪ್ರತಿಯಾಗಿ ಕೇವಲ 103 ಮಹಿಳಾ ನ್ಯಾಯಾಧೀಶರಿದ್ದಾರೆ ಎಂದು ಸಿಂಗ್ ತನ್ನ ಪತ್ರದಲ್ಲಿ ಬೆಟ್ಟು ಮಾಡಿದ್ದಾರೆ.

ದೇಶದಲ್ಲಿ ಒಟ್ಟು 25 ಉಚ್ಚ ನ್ಯಾಯಾಲಯಗಳಿವೆ.

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಒದಗಿಸಲು ಸಂಸತ್ತು ಇತ್ತೀಚಿಗೆ ಅಂಗೀಕರಿಸಿರುವ ಮಸೂದೆಯನ್ನು ಅವರು ಉಲ್ಲೇಖಿಸಿದ್ದಾರೆ.

ಶೇ.33ರಷ್ಟು ಹುದ್ದೆಗಳು ಮಹಿಳೆಯರಿಂದ ಭರ್ತಿಯಾಗುವಂತಾಗಲು ಉಚ್ಚ ನ್ಯಾಯಾಲಯಗಳು ಮತ್ತು ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಾಧೀಶರ ನೇಮಕಾತಿಗಳಿಗಾಗಿ ವಿಶ್ವಾಸಾರ್ಹ ವ್ಯವಸ್ಥೆಯೊಂದನ್ನು ತರುವಂತೆ ಅವರು ಮುಖ್ಯ ನ್ಯಾಯಾಧೀಶರನ್ನು ಆಗ್ರಹಿಸಿದ್ದಾರೆ.

ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿಯನ್ನು ತರುವ ಮೂಲಕ ಶಾಸಕಾಂಗದಲ್ಲಿಯ ಅಸಮತೋಲನವನ್ನು ನಿವಾರಿಸಲು ಉಪಕ್ರಮವನ್ನು ಆರಂಭಿಸಿದೆ. ಇದು ತನ್ನದೇ ಆದ ನೇಮಕಾತಿ ವಿಧಾನವನ್ನು ನಿರ್ಧರಿಸುವ ನ್ಯಾಯಾಂಗಕ್ಕೆ ಮಹಿಳೆಯರಿಗೆ ಮೀಸಲಾತಿಯನ್ನು ಒದಗಿಸಲು ಸೂಕ್ತ ಸಮಯವಾಗಿದೆ ಎಂದು ಸಿಂಗ್ ತನ್ನ ಪತ್ರದಲ್ಲಿ ಹೇಳಿದ್ದಾರೆ.

ಅಂಕಿಅಂಶಗಳು ಉನ್ನತ ನ್ಯಾಯಾಂಗದಲ್ಲಿ ಮಹಿಳೆಯರ ಅಸಮರ್ಪಕ ಪ್ರಾತಿನಿಧ್ಯವನ್ನು ಸೂಚಿಸುತ್ತಿವೆ ಎಂದು ಹೇಳಿರುವ ಅವರು,ಸ್ವತಂತ್ರ ಭಾರತದ 76 ವರ್ಷಗಳ ಇತಿಹಾಸದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕಗೊಂಡ 270 ನ್ಯಾಯಾಧೀಶರಲ್ಲಿ ಕೇವಲ 11 ಮಹಿಳೆಯರಿದ್ದಾರೆ ಎನ್ನುವುದು ನಿರಾಶಾದಾಯಕವಾಗಿದೆ. ಇದು ಈವರೆಗಿನ ನೇಮಕಾತಿಗಳ ಕೇವಲ ಶೇ.4ರಷ್ಟಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News