ಎಸ್‌ಸಿಒ ಶೃಂಗಸಭೆ: ಚೀನಾಕ್ಕೆ ಪ್ರಯಾಣಿಸಲಿರುವ ಪ್ರಧಾನಿ
ಗಲ್ವಾನ್ ಸಂಘರ್ಷದ ಬಳಿಕ ಮೊದಲ ಭೇಟಿ
PC : PTI
ಹೊಸದಿಲ್ಲಿ,ಆ.6: ಪ್ರಧಾನಿ ನರೇಂದ್ರ ಮೋದಿಯವರು ತಿಯಾಂಜಿನ್ ನಗರದಲ್ಲಿ ಆ.31ರಿಂದ ಸೆ.1ರವರೆಗೆ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ(ಎಸ್‌ಸಿಒ)ಯ ಪ್ರಾದೇಶಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಚೀನಾಕ್ಕೆ ಪ್ರಯಾಣಿಸಲಿದ್ದಾರೆ. ಇದು 2020ರ ಗಲ್ವಾನ್ ಸಂಘರ್ಷದ ಬಳಿಕ ಹದಗೆಟ್ಟಿದ್ದ ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಸಹಜಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವಪೂರ್ಣ ಹೆಜ್ಜೆಯನ್ನು ಸೂಚಿಸುತ್ತಿದೆ.
ಮೋದಿ 2019ರಲ್ಲಿ ಚೀನಾಕ್ಕೆ ಕೊನೆಯ ಭೇಟಿಯನ್ನು ನೀಡಿದ್ದರು,ಆದರೆ ಅಕ್ಟೋಬರ್ 2024ರಲ್ಲಿ ಕಝಾನ್ ನಲ್ಲಿ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾಗಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದ ಕಠಿಣ ಸುಂಕಗಳ ಹೇರಿಕೆ ಮತ್ತು ರಶ್ಯಾದಿಂದ ತೈಲ ಖರೀದಿಸದಂತೆ ಭಾರತದ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ ಈ ಭೇಟಿ ನಡೆಯುತ್ತಿದೆ. ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಮತ್ತು ಪಹಲ್ಗಾಮ್ ದಾಳಿ ನೆರಳಿನ ಹಿನ್ನೆಲೆಯಲ್ಲಿ ಭಾರತವು ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದೆ.