ಡಿಎಂಕೆಯ ದ್ರಾವಿಡ ಮಾದರಿ ರಾಜಕೀಯದಲ್ಲಿ ಪತ್ಯೇಕತಾವಾದಿ ಮನಸ್ಥಿತಿಯೇ ಪ್ರಾಬಲ್ಯ ಹೊಂದಿದೆ: ನಿರ್ಮಲಾ ಸೀತಾರಾಮನ್
Photo:PTI
ಹೊಸದಿಲ್ಲಿ, ಸೆ. 7: ತಮಿಳುನಾಡಿನ ಆಡಳಿತಾರೂಢ ಡಿಎಂಕೆ ತನ್ನ ಸರಕಾರವನ್ನು ಕಾಡುತ್ತಿರುವ ಭ್ರಷ್ಟಾಚಾರ ಹಾಗೂ ಜಾತಿ ಅಪರಾಧಗಳ ಆರೋಪಗಳಿಗೆ ಉತ್ತರವಿಲ್ಲದ ಕಾರಣ ಬಿಜೆಪಿಯನ್ನು ಗುರಿಯಾಗಿಸಲು ಭಾಷೆ ಹಾಗೂ ದ್ರಾವಿಡ ಗುರುತಿನ ಕುರಿತ ಭಾವನಾತ್ಮಕ ವಿಷಯಗಳನ್ನು ಎತ್ತುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪಿಟಿಐಯೊಂದಿಗೆ ಮಾತನಾಡಿದ ನಿರ್ಮಲಾ ಸೀತಾರಾಮನ್, ರಾಜ್ಯದ ಡಿಎಂಕೆ ಸರಕಾರವನ್ನು ಕಟುವಾಗಿ ಟೀಕಿಸಿದರು. ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ, ಮಹಿಳೆಯರ ವಿರುದ್ಧದ ಅಪರಾಧದ ಘಟನೆಗಳು, ಜಾತಿ ಹಿಂಸಾಚಾರ, ಮುಖ್ಯವಾಗಿ ದಲಿತರ ಮೇಲಿನ ಹಿಂಸಾಚಾರ, ಮಾದಕ ದ್ರವ್ಯ ಸೇವನೆ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು. ಈ ಆರೋಪಗಳಿಗೆ ಡಿಎಂಕೆಯಲ್ಲಿ ಯಾವುದೇ ಉತ್ತರ ಇಲ್ಲ ಎಂದು ಅವರು ಹೇಳಿದರು.
‘‘ಅವರು (ಡಿಎಂಕೆ) ಈ ಬಗ್ಗೆ ಗಮನಹರಿಸದೆ ಪ್ರತ್ಯೇಕತಾವಾದಿ ತರ್ಕ ಮುಂದಿಡುವ ಮೂಲಕ ಸಮಯ ಕಳೆಯುತ್ತಿದ್ದಾರೆ. ತಮ್ಮ ತೆರಿಗೆಯ ಹಣ ಬಿಹಾರಕ್ಕೆ ಹೋಗುತ್ತಿದೆ ಎಂದು ಆರೋಪಿಸುತ್ತಾರೆ. ಬಿಹಾರ ಪಾಕಿಸ್ತಾನದಲ್ಲಿದೆಯೇ? ಬಿಹಾರದ ಜನರು ನಿಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡಬಹುದು. ನೀವು ಲಾಭ ಮಾಡಿಕೊಳ್ಳಬಹುದು. ಆದರೆ, ನೀವು ನಿಮ್ಮ ತೆರಿಗೆಯ ಹಣವನ್ನು ನಿಮ್ಮಲ್ಲೇ ಇರಿಸಿಕೊಳ್ಳಲು ಬಯಸುತ್ತೀರಿ. ತಥಾಕಥಿತ ದ್ರಾವಿಡ ಮಾದರಿಯ ರಾಜಕೀಯದಲ್ಲಿ ಪ್ರತ್ಯೇಕತಾವಾದಿ ಮನಸ್ಥಿತಿಯೇ ತುಂಬಿಕೊಂಡಿದೆ’’ ಎಂದು ಅವರು ಹೇಳಿದರು.
ಡಿಎಂಕೆ ಸಾಮಾಜಿಕ ನ್ಯಾಯದ ಪ್ರತಿಪಾದಕ ಎಂದು ಹೇಳಿಕೊಳ್ಳುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ವಿವಿಧ ಭಾಗಗಳಲ್ಲಿ ಜಾತಿ ಹಿಂಸಾಚಾರ ಪುನರಾವರ್ತನೆಯಾಗುತ್ತಿದೆ ಎಂಬುದು ಸ್ಪಷ್ಟ. ಜಾತಿ ಹಿಂಸಾಚಾರಕ್ಕೆ ಪದೇ ಪದೇ ಬಲಿಯಾಗುತ್ತಿರುವವರು ಪರಿಶಿಷ್ಟ ಜಾತಿಯ ಸದಸ್ಯರು ಎಂದರು.